Advertisement

ಮೀಸಲು ದುರ್ಬಳಕೆ ಸಂವಿಧಾನಬಾಹಿರ

03:31 PM Mar 27, 2022 | Team Udayavani |

ಮೊಳಕಾಲ್ಮೂರು: ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ಕಡೆ ಲಿಂಗಾಯತ ಜಾತಿಯವರು ಪರಿಶಿಷ್ಟ ಜಾತಿಯವರೆಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಎಸ್‌ಸಿ ಮೀಸಲಾತಿ ಸೌಲಭ್ಯ ಕಬಳಿಸುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಜಿ. ಶ್ರೀನಿವಾಸಮೂರ್ತಿ ಆರೋಪಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪರಿಶಿಷ್ಟ ಜಾತಿಯ ಬೇಡಜಂಗಮ/ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರವನ್ನು ಅರ್ಹರಲ್ಲದ ಜಂಗಮರು, ಐನರು, ಹಿರೇಮಠದವರು, ಹಾಗೂ ವೀರಶೈವ ಲಿಂಗಾಯತರು ಕಾನೂನು ಬಾಹಿರವಾಗಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ವಂಚಿಸುವುತ್ತಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಬೇಡಜಂಗಮ ಹಾಗೂ ಬುಡ್ಗ ಜಂಗಮ ಜನಾಂಗವೂ ಒಂದಾಗಿದೆ. ರಾಜ್ಯದಲ್ಲಿ ಸುಮಾರು 3500 ಕುಟುಂಬಗಳಿವೆ. ಬೇಡಜಂಗಮ ಹಾಗೂ ಬುಡ್ಗ ಜಂಗಮ ಜನಾಂಗದವರು ಮೂಲತಃ ಆಂಧ್ರಪ್ರದೇಶದವರಾಗಿದ್ದಾರೆ. ಬೇಡ ಜಂಗಮ ಹಾಗೂ ಬುಡ್ಗ ಜಂಗಮ ಜನಾಂಗದವರು ಮಾಂಸಾಹಾರಿಗಳಾಗಿದ್ದು ಕಾಡುಗಳಲ್ಲಿ ಬೇಟೆಯಾಡಿ ಹಾಗೂ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಹಿಂದುಳಿದ ಬೇಡ ಜಂಗಮ ಹಾಗೂ ಬುಡ್ಗ ಜಂಗಮ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದೆ. ಆದರೆ ಪ್ರಸ್ತುತ ಜಂಗಮರು, ಐನರು, ಹಿರೇಮಠದವರು ಹಾಗೂ ವೀರಶೈವ ಲಿಂಗಾಯತರು ಎಂಬ ಮೂಲ ಜಾತಿಯವರಿಂದ ಗುರುತಿಸಿಕೊಳ್ಳುವವರು ಪರಿಶಿಷ್ಟ ಜಾತಿಯ ಬೇಡಜಂಗಮರೆಂದು ಜಾತಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ.

ವಿದ್ಯಾಭ್ಯಾಸ, ಸರ್ಕಾರಿ ನೌಕರಿ, ಬಡ್ತಿ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡುವ ಜೊತೆಗೆ ರಾಜಕೀಯ ಒತ್ತಡದಿಂದ ಬೇಡಜಂಗಮ ಹಾಗೂ ಬುಡ್ಗ ಜಂಗಮರೆಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಬೇಡ ಜಂಗಮ ಹಾಗೂ ಬುಡ್ಗ ಜಂಗಮ ಜನಾಂಗದವರು ನಕಲಿ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿರುವುದು ಶಾಸನ ಸಭೆಯಲ್ಲಿ ಚರ್ಚೆಯಾಗಿರುವುದು ರಾಜ್ಯದ ಗಮನಕ್ಕೆ ಬಂದಿದೆ. ಪರಿಶಿಷ್ಟ ಜಾತಿಯವರಿಗೆ ವಂಚಿಸಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಪಡೆದ ಜಂಗಮರು, ಐನರು, ಹಿರೇಮಠದವರು ಹಾಗೂ ವೀರಶೈವ ಲಿಂಗಾಯತರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗದಂತೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ದಸಂಸ ತಾಲೂಕು ಘಟಕದ ಮಂಜುನಾಥ ಮಾತನಾಡಿ, ರಾಜ್ಯದಲ್ಲಿ ಮೇಲ್ಜಾತಿಗೆ ಸೇರಿದ ಜಂಗಮ ಜಾತಿ ಹಾಗೂ ಅದರ ಉಪಜಾತಿಗಳು ಪರಿಶಿಷ್ಟ ಜಾತಿಯಡಿ ಬರುವ ಬೇಡ ಜಂಗಮ ಸಮುದಾಯದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡು ಮೀಸಲಾತಿ ಸೌಲಭ್ಯವನ್ನು ಕಬಳಿಸುತ್ತಿವೆ. ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಸಮುದಾಯಕ್ಕೆ ವಂಚಿಸಲಾಗುತ್ತಿದೆ. ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಪುತ್ರಿಗೆ ಬೇಡಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿಯವರ ಪ್ರಮಾಣಪತ್ರ ನೀಡಿರುವುದು ಕಲಾಪದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗಿದೆ.

Advertisement

ತಾಲೂಕಿನಲ್ಲಿ ಸಹ ಬಹುತೇಕ ಜಂಗಮರು, ಲಿಂಗಾಯತರು ಸೇರಿದಂತೆ ಇನ್ನಿತರ ಮೇಲ್ವರ್ಗದ ಜನಾಂಗದವರು ನಕಲಿ ಜಾತಿ ಪ್ರಮಾಣವನ್ನು ಪಡೆದು ಪರಿಶಿಷ್ಟರಿಗೆ ಅನ್ಯಾಯವೆಸಗಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಒಬ್ಬರು ಪರಿಶಿಷ್ಟ ಜಾತಿಯ ನಕಲಿ ಪ್ರಮಾಣಪತ್ರ ಪಡೆದು ಪೆಟ್ರೋಲ್‌ ಬಂಕ್‌ ಸೌಲಭ್ಯದ ಮಂಜೂರಾತಿ ಪಡೆದು ಪರಿಶಿಷ್ಟ ಜಾತಿಗೆ ವಂಚಿಸಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಟಿ. ಸುರೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸ ತಾಲೂಕು ಸಂಚಾಲಕ ಒ. ಕರಿಬಸಪ್ಪ, ಪದಾಧಿಕಾರಿಗಳಾದ ನಾಗೇಂದ್ರಪ್ಪ, ಪ್ರಶಾಂತ, ವಿಜಯಕುಮಾರ್‌, ಅನಿಲ್‌ಕುಮಾರ್‌, ಸಿದ್ದಪ್ಪ, ಟಿ. ಚಂದ್ರಣ್ಣ, ತಿಪ್ಪೇಸ್ವಾಮಿ ಮುದ್ದಪ್ಪ, ಓಂಕಾರಪ್ಪ, ನಾಗರಾಜ್‌, ರಮೇಶ್‌, ನಾಗೇಂದ್ರ, ಚಂದ್ರಪ್ಪ, ಮಾರಣ್ಣ, ರುದ್ರಪ್ಪ, ಮಹೇಶ್‌, ಶಿವಣ್ಣ, ರುದ್ರಮುನಿ, ಪಾಲಯ್ಯ, ರಾಜಣ್ಣ ಹಾಗೂ ದಸಂಸ ಕಾರ್ಯಕರ್ತರು ಭಾಗವಹಿಸಿದ್ದರು.

ಹಿಂದುಳಿದ ಬೇಡ ಜಂಗಮ ಹಾಗೂ ಬುಡ್ಗ ಜಂಗಮ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದೆ. ಆದರೆ ಜಂಗಮರು, ಐನರು, ಹಿರೇಮಠದವರು ಹಾಗೂ ವೀರಶೈವ ಲಿಂಗಾಯತರು ಎಂಬ ಮೂಲ ಜಾತಿಯವರಿಂದ ಗುರುತಿಸಿಕೊಳ್ಳುವವರು ಪರಿಶಿಷ್ಟ ಜಾತಿಯ ಬೇಡಜಂಗಮರೆಂದು ಜಾತಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿರುವುದು ವಿಪರ್ಯಾಸ.  ಜಿ. ಶ್ರೀನಿವಾಸಮೂರ್ತಿ, ದಸಂಸ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next