Advertisement

ಮೀಸಲು ಮಿತಿ ಹೆಚ್ಚಳ ? ಶೇ. 50ಕ್ಕಿಂತ ಹೆಚ್ಚಿಸಲು ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌

12:25 AM Mar 23, 2021 | Team Udayavani |

ಬೆಂಗಳೂರು : ರಾಜ್ಯ ಸರಕಾರವು ಮೀಸಲಾತಿಯನ್ನು ಶೇ. 50ಕ್ಕಿಂತ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿದೆ.
ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಇಂದಿರಾ ಸಹಾನಿ ಪ್ರಕರಣದ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಶೇ. 50ರ ಮಿತಿಯಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಆದರೆ ದಲಿತರು, ಹಿಂದುಳಿದ ವರ್ಗಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಆ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಅಗತ್ಯವಿದೆ. ಜತೆಗೆ ಅನೇಕ ಸಮುದಾಯಗಳು ಮೀಸಲಾತಿಗೆ ಬೇಡಿಕೆ ಮಂಡಿಸಿವೆ. ಹೀಗಾಗಿ ಮೀಸಲಾತಿ ಹೆಚ್ಚಳ ಅನುಕೂಲಕರ ಎನ್ನುವ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯಗಳ ಅಭಿಪ್ರಾಯ ಕೇಳಿದ್ದ ಸುಪ್ರೀಂ
ಮಹಾರಾಷ್ಟ್ರ ಸರಕಾರ ಮರಾಠ ಸಮುದಾಯಕ್ಕೆ ಶೇ. 16ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿತ್ತು. ಆದರೆ 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಮಿತಿ ಶೇ. 50 ಮೀರದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಮರಾಠ ಸಮುದಾಯಕ್ಕೆ ಶೇ. 16 ಮೀಸಲಾತಿ ನೀಡುವ ಮೂಲಕ ಒಟ್ಟು ಮೀಸಲಾತಿ ಶೇ. 75ರಷ್ಟು ಆಗುತ್ತಿದ್ದು, ಸರಕಾರವು ಸು.ಕೋ. ತೀರ್ಪನ್ನು ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ಸುಪ್ರೀಂ ಮೆಟ್ಟಿಲೇರಿದ್ದು, ಮೀಸಲಾತಿ ಮಿತಿಯನ್ನು ಶೇ. 50ಕ್ಕಿಂತ ಹೆಚ್ಚಿಸಬಹುದೇ ಎಂಬ ಕುರಿತು ಅದು ಎಲ್ಲ ರಾಜ್ಯಗಳ ಅಭಿಪ್ರಾಯ ಕೇಳಿತ್ತು. ಈ ಆಧಾರದಲ್ಲಿ ರಾಜ್ಯ ಸರಕಾರ ನಿಲುವು ವ್ಯಕ್ತಪಡಿಸಿ ಅಫಿದವಿತ್‌ ಸಲ್ಲಿಸಿದೆ.

ರಾಜ್ಯ ಸರಕಾರದ
ನಿಲುವು ಸ್ವಾಗತಾರ್ಹ. ಮೀಸಲಾತಿ ಶೇ. 50ರಷ್ಟು ಇರಬೇಕು ಎಂಬ ಮಿತಿಯು ಸಂವಿಧಾನದಲ್ಲಿ ಅಡಕವಾಗಿರುವ ನಿಯಮ ಅಲ್ಲ. ಬದಲಿಗೆ ನ್ಯಾಯಾಂಗ ತಾನೇ ಹಾಕಿಕೊಂಡದ್ದು. ಈ ದಿಶೆಯಲ್ಲಿ ರಾಜ್ಯ ಸರಕಾರಕ್ಕೆ ಯಶಸ್ಸು ಸಿಗಲಿ. ಶೇ. 50ರ
ಬದಲಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುವಂತಾಗಲಿ.
– ಪ್ರೊ| ರವಿವರ್ಮ ಕುಮಾರ್‌, ಮಾಜಿ ಅಡ್ವೋಕೇಟ್‌ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next