Advertisement

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ

10:12 AM Feb 09, 2020 | sudhir |

ನವದೆಹಲಿ: ಸರ್ಕಾರಿ ಉದ್ಯೋಗಗಳ ನೇಮಕಾತಿ ಹಾಗೂ ಬಡ್ತಿ ವಿಚಾರಗಳಲ್ಲಿ ಮೀಸಲಾತಿ ಕೋರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೂಲಭೂತ ಹಕ್ಕಲ್ಲ . ಮೀಸಲಾತಿ ನಿಗದಿಯ ಬಗ್ಗೆ ಯಾವುದೇ ನ್ಯಾಯಾಲಯವು, ರಾಜ್ಯ ಸರ್ಕಾರಗಳಿಗೆ ಆದೇಶ ನೀಡುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ.

Advertisement

ಜೊತೆಗೆ, “ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ. ಸಂವಿಧಾನದ 16 (4) ಹಾಗೂ 16 (4-ಎ) ಪರಿಚ್ಛೇದಗಳು ದಮನಕ್ಕೊಳಗಾದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿವೆ. ಆದರೆ, ಮೀಸಲಾತಿ ಎನ್ನುವುದು ಮೂಲಭೂತ ಹಕ್ಕು ಎಂದು ಎಲ್ಲೂ ಹೇಳಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಹಾಗೂ ಹೇಮಂತ್‌ ಗುಪ್ತಾ ಅವರುಳ್ಳ ನ್ಯಾಯಪೀಠ ಹೇಳಿದೆ.

“ನೇಮಕಾತಿ ಅಥವಾ ಬಡ್ತಿಯಲ್ಲಿ ಮೀಸಲಾತಿ ನೀಡಬೇಕಾದ ಪ್ರಸ್ತಾಪ ಬಂದಾಗ, ಸಂಬಂಧಪಟ್ಟ ರಾಜ್ಯ ಸರ್ಕಾರ, ಆ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಿಕ್ಕಿರುವ ಪ್ರಾತಿನಿಧ್ಯದ ಬಗ್ಗೆ ದತ್ತಾಂಶಗಳನ್ನು ಕಲೆಹಾಕಬೇಕು. ಆ ದತ್ತಾಂಶಗಳನ್ನು ಪರಾಮರ್ಶಿಸಿದ ನಂತರ, ಉದ್ಯೋಗದಲ್ಲಿ ಅಥವಾ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿರ್ಧರಿಸಬಹುದು. ಹಾಗೊಂದು ವೇಳೆ, ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟರಿಗೆ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕಿರುವುದು ಮನವರಿಕೆಯಾದರೆ ಆನಂತರದಲ್ಲಿ ಆಗುವ ಸರ್ಕಾರಿ ನೇಮಕಾತಿಗಳಲ್ಲಿ ಅಥವಾ ಬಡ್ತಿ ಪ್ರಕ್ರಿಯೆಗಳಲ್ಲಿ ಮೀಸಲಾತಿ ಕಲ್ಪಿಸದಿರುವ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದು. ಅಂಥ ಸಂದರ್ಭಗಳಲ್ಲಿ, ಆ ನಿರ್ಧಾರವನ್ನು ಸಮರ್ಥಿಸುವ ಅವಶ್ಯಕತೆ ಬೇಕಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಕೋರ್ಟ್‌ ಹೇಳಿದ್ದೇನು?
– ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ
– ಯಾವುದೇ ನ್ಯಾಯಾಲಯ ಮೀಸಲಾತಿ ಬಗ್ಗೆ ಯಾವುದೇ ರಾಜ್ಯ ಸರ್ಕಾರಕ್ಕೆ ಆದೇಶ ನೀಡುವ ಹಾಗಿಲ್ಲ
– ಚಾಲ್ತಿಯಲ್ಲಿರುವ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟರ ಪ್ರಾತಿನಿಧ್ಯ ಅರಿತು ಮೀಸಲಾತಿ ಬಗ್ಗೆ ನಿರ್ಧರಿಸಬಹುದು
– ಉದ್ಯೋಗಗಳ ನೇಮಕಾತಿ ಮಾತ್ರವಲ್ಲದೆ, ಬಡ್ತಿಗಳ ವಿಚಾರದಲ್ಲೂ ಈ ತೀರ್ಪು ಅನ್ವಯ.

Advertisement

Udayavani is now on Telegram. Click here to join our channel and stay updated with the latest news.

Next