Advertisement

ಉದ್ಧಾರವಾಗಲಿ ಕನ್ನಡ ಶಾಲೆ ಭಾಷೆ ಉಳಿವಿಗೆ ಮೀಸಲಾತಿ

07:43 AM Jul 08, 2017 | |

ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಉತ್ತಮ ನಿರ್ಧಾರ. ಕಣ್ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ನಡೆ ಪ್ರಶಂಸಾರ್ಹ. 

Advertisement

ಈಗೀಗ ಮೀಸಲಾತಿ ಎಂಬ ಶಬ್ದ ಕೇಳಿದಾಗಲೇ ಒಂದು ರೀತಿಯ ರೇಜಿಗೆ ಹುಟ್ಟಿಕೊಳ್ಳುತ್ತದೆ. ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಎಲ್ಲ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದ ಕೆಲವು ಸಮುದಾಯಗಳ ಉದ್ಧಾರ ಮಾಡಲು ಪ್ರಾರಂಭಿಸಿದ ಈ ವ್ಯವಸ್ಥೆ ಅನಂತರ ರಾಜಕೀಯ ವ್ಯಕ್ತಿಗಳ ಕೈಗೆ ಸಿಲುಕಿ ಮತ ಗಳಿಸುವ ಒಂದು ಪ್ರಬಲ ತಂತ್ರವಾಗಿ ಬದಲಾದ ಬಳಿಕ ಮೀಸಲಾತಿ ಎಂದರೆ ಸಭ್ಯರಿಗೆ ವಾಕರಿಕೆ ಬರುವಂತಾಗಿದೆ. ದಲಿತರು, ಅಲ್ಪಸಂಖ್ಯಾಕರು, ಎಸ್‌ಸಿ, ಎಸ್‌ಟಿ ಸಮುದಾಯದವರು ಮೀಸಲಾತಿಯೆಂಬ ಪಗಡೆಯಾಟದಲ್ಲಿ ದಾಳವಾಗಿ ಬಳಕೆಯಾಗುತ್ತಾರೆ. ಮೀಸಲಾತಿ ವಿಚಾರದಲ್ಲಿ ಕರ್ನಾಟಕ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಸ್ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸರಕಾರಿ ನೌಕರಿಯಲ್ಲಿ ಶೇ. 70 ಮೀಸಲಾತಿ ನೀಡುವ ಪ್ರಸ್ತಾವ ಮಂಡಿಸಿತ್ತು. ಅಲ್ಲದೆ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ. 100 ಮೀಸಲಾತಿ ಒದಗಿಸುವ ಪ್ರಸ್ತಾವವೂ ಸರಕಾರದ ಮುಂದಿದೆ. ಕಳೆದ 70 ವರ್ಷಗಳಲ್ಲಿ ಮೀಸಲಾತಿಯಿಂದ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಹೀಗಾಗಿ ಮೀಸಲಾತಿ ಎನ್ನುವಾಗ ಇದು ಯಾರನ್ನು ಓಲೈಸಲು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆದರೆ ನಿನ್ನೆ ಸರಕಾರ ಪ್ರಕಟಿಸಿದ ಮೀಸಲಾತಿ ನಿರ್ಧಾರ ಮಾತ್ರ ಈ ಮೇಲಿನ ಮೀಸಲಾತಿಗಿಂತ ಭಿನ್ನವಾಗಿದೆ. ಮೊದಲ ಬಾರಿಗೆ ಸರಕಾರ ಜಾತಿ, ಧರ್ಮದ ಹಂಗು ಬಿಟ್ಟು ರಾಜ್ಯದ ಭಾಷೆ  ಉಳಿವಿಗೆ ಮೀಸಲಾತಿ ಪ್ರಕಟಿಸಿದೆ. 

ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರಿಗೆ ಸರಕಾರಿ ಉದ್ಯೋಗದಲ್ಲಿ ಶೇ.5 ಮೀಸಲಾತಿ ನೀಡಲು ನಿರ್ಧರಿಸಿದೆ ಸರಕಾರ. ಕನ್ನಡ ಮಾಧ್ಯಮ ಶಾಲೆಗಳೆಂದರೆ ಈಗ ಇರುವುದು ಸರಕಾರಿ ಶಾಲೆಗಳು ಮಾತ್ರ. ಎಲ್ಲೋ ಕೆಲವು ಬೆರಳೆಣಿಕೆಯ ಖಾಸಗಿ ಶಾಲೆಗಳು ಇವೆ. ವಿದ್ಯಾರ್ಥಿಗಳ ಕೊರತೆಯಿಂದ ಕಣ್ಣುಮುಚ್ಚುತ್ತಿರುವ ಈ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ನಿರ್ಧಾರ ಎನ್ನಬಹುದು. ನೌಕರಿ ಸಿಗುವ ಆಶೆಯಿಂದಲಾದರೂ ಜನ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿಯಾರು. ಯಾವುದೇ ಪೋಷಕರಲ್ಲಿ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಏಕೆ ಕಳುಹಿಸುತ್ತೀರಿ ಎಂದು ಕೇಳಿದರೆ ಮುಂದೆ ನೌಕರಿ ಪಡೆದುಕೊಳ್ಳಲು ಸುಲಭವಾಗುತ್ತದೆ ಎಂಬ ಉತ್ತರ ಸಿಗುತ್ತದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ಏನಾದರೊಂದು ನೌಕರಿ ಸಿಗಬಹುದು ಎಂಬ ನಂಬಿಕೆ ಗಾಢವಾಗಿ ಜನರ ಮನಸ್ಸಿನಲ್ಲಿ ಬೇರೂರಿದೆ. ಈ ನಂಬಿಕೆಯಿಂದ ಕನ್ನಡ ಮಾಧ್ಯಮಗಳಲ್ಲಿ ಕಲಿಸುವ ಸರಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳು ಕಡಿಮೆಯಾಗುತ್ತಿದ್ದಾರೆ. ಕನ್ನಡ ಶಾಲೆಗಳಲ್ಲಿ ಕಲಿತರೂ ನೌಕರಿ ಸಿಗುತ್ತದೆ ಎಂಬ ಖಾತರಿಯಿದ್ದರೆ ಈ ಶಾಲೆಗಳು ಉಳಿಯುವುದು ಮಾತ್ರವಲ್ಲದೆ ಕನ್ನಡ ಭಾಷೆಯೂ ಉಳಿಯಲಿದೆ. ಭಾಷೆ ಉಳಿದರೆ ಸಂಸ್ಕೃತಿ, ಆಚಾರ ವಿಚಾರಗಳು ಉಳಿಯುತ್ತವೆ.

ಹೀಗಾಗಿಯೇ ಬಹಳ ವರ್ಷಗಳಿಂದ ಕನ್ನಡ ಶಾಲೆಯಲ್ಲಿ ಕಲಿತವರಿಗೆ ನೌಕರಿಯಲ್ಲಿ ಮೀಸಲಾತಿ ಒದಗಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿತ್ತು. ಪರಿಷ್ಕೃತ ಸರೋಜಿನಿ ಮಹಿಷಿ ವರದಿಯಲ್ಲೂ ಕನ್ನಡ ಶಾಲೆಯಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಶಿಫಾರಸು ಮಾಡಲಾಗಿತ್ತು. ಇದನ್ನು ಪರಿಗಣಿಸಿ ಸರಕಾರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಯಾವುದೇ ಭಾಗದಲ್ಲಿ ಕನಿಷ್ಠ 1ರಿಂದ 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿದರೆ ಸರಕಾರಿ ನೌಕರಿಯಲ್ಲಿ ಶೇ. 5 ಮೀಸಲಾತಿಯ ಲಾಭ ಪಡೆದುಕೊಳ್ಳಬಹುದು ಎಂದು ಸುತ್ತೋಲೆ ಹೊರಡಿಸಿದೆ. ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮತ್ತು ಗೋವಾಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಮುಖ್ಯವಾಗಿ ಕೇರಳಕ್ಕೆ ಸೇರಿ ಹೋಗಿರುವ ಕಾಸರಗೋಡು, ಮಹಾರಾಷ್ಟ್ರದ ಆಡಳಿತಕ್ಕೊಳಪಟ್ಟಿರುವ ಬೆಳಗಾವಿ ಜಿಲ್ಲೆಯ ಭಾಗಗಳಲ್ಲಿರುವ ಕನ್ನಡದ ಮಕ್ಕಳಿಗೆ ಹೆಚ್ಚು ಲಾಭವಾಗಬಹುದು. ಇಷ್ಟು ಮಾತ್ರವಲ್ಲದೆ, ಮಕ್ಕಳು ಬರುವಂತಿದ್ದರೆ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಪ್ರಾರಂಭವಾಗಿ ಗುಣಮಟ್ಟದ ಶಿಕ್ಷಣ ಸಿಗುವ ಸಾಧ್ಯತೆಯೂ ಇದೆ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ನೀಡುವ ಜತೆಗೆ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವ ಬಾಧ್ಯತೆಯೂ ಇದೆ. ಸರಕಾರಿ ನೌಕರಿಗೆ ಅರ್ಹರಾಗುವ ಅಭ್ಯರ್ಥಿಗಳು ರೂಪುಗೊಳ್ಳುವಂತಹ ಶೈಕ್ಷಣಿಕ ವಾತಾವರಣವೂ ಸರಕಾರಿ ಶಾಲೆಗಳಲ್ಲಿ ಇರುವುದು ಅಷ್ಟೇ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next