ಬೆಂಗಳೂರು: ಸರ್ಕಾರಿ ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ನೀಡಲು ವಿಶೇಷ ಕಾನೂನು ಜಾರಿಗೆ ತಂದಿರುವ ಸರ್ಕಾರ, ಇದೀಗ ಆ ಕಾನೂನಿಗೆ ನಿಯಮಗಳನ್ನು ರೂಪಿಸಿ ರಾಜ್ಯಪತ್ರ ಹೊರಡಿಸಿದೆ.
ನಿಯಮದಂತೆ 50 ಲಕ್ಷ ರೂ. ಮೊತ್ತದವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ನೀಡಬೇಕು. ಇದರಲ್ಲಿ ಎಸ್ಸಿ ವರ್ಗದ ಗುತ್ತಿಗೆದಾರರಿಗೆ ಶೇ.17.15 ಹಾಗೂ ಎಸ್ಟಿ ವರ್ಗದ ಗುತ್ತಿಗೆದಾರಿಗೆ ಶೇ.6.95 ಮೀಸಲಾತಿ ವರ್ಗೀಕರಿಸಲಾಗಿದೆ.
ಸರ್ಕಾರಿ ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ವಿಶೇಷ ಕಾನೂನು ರಚಿಸಿ ಇದೇ ಜೂನ್ 29ರಂದು ಸರ್ಕಾರ ರಾಜ್ಯಪತ್ರ ಹೊರಡಿಸಿತ್ತು. ಆದರೆ, ಕಾನೂನಿಗೆ ನಿಯಮಗಳನ್ನು ರೂಪಿಸಲಾಗಿಲ್ಲ ಮತ್ತು ಮಾರ್ಗಸೂಚಿಗಳು ಇಲ್ಲ ಎಂದು ಹೇಳಿ ಕೆಲವು ಇಲಾಖೆಗಳು ಎಸ್ಸಿ, ಎಸ್ಟಿ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ನಿಗದಿಪಡಿಸದೇ ಟೆಂಡರ್‌ಗಳನ್ನು ಕರೆದಿದ್ದರು. ಇದನ್ನು ಪ್ರಶ್ನಿಸಿದ್ದರಿಂದ ಲೋಕೋಪಯೋಗಿ ಸಚಿವರು ಟೆಂಡರ್‌ಗಳನ್ನು ರದ್ದುಪಡಿಸಿದ್ದರು.
ಆದರೆ, ಈಗ ಕಾನೂನಿಗೆ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಲಾಗಿದ್ದು, ಸ್ಥಗಿತಗೊಂಡ ಕಾಮಗಾರಿಗಳ ಟೆಂಡರ್ ಕರೆಯುವುದರ ಜೊತೆಗೆ ಸರ್ಕಾರದ ಅಧಿಸೂಚನೆಯಂತೆ ರಿಯಾಯತಿ ನೀಡಿ ಟೆಂಡರ್ ಕರೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿರುವ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ, ಈ ಕಾನೂನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಸಲಹೆ ನೀಡಿದ್ದಾರೆ.