ಕೃಷಿ ವಲಯವು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಹಾಗೂ ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯವಾಗಿ ಮುಂದುವರಿದಿದೆ. ಆಹಾರ ಭದ್ರತೆ ಕಾಪಾಡುವ ಸರಕಾರದ ವಾಗ್ಧಾನವು ಮುಖ್ಯವಾಗಿ ಕೃಷಿ ವಲಯವನ್ನೇ ನಂಬಿದೆ. ಹೀಗಿರುವಾಗ ಕೃಷಿ ಕ್ಷೇತ್ರದತ್ತ ಹೆಚ್ಚು ಜನರನ್ನು ಸೆಳೆಯಲು ಮತ್ತು ರೈತ ಕುಟುಂಬಗಳ ಮುಂದಿನ ತಲೆಮಾರುಗಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಲು ವಿವಿಧ ಕೃಷಿ ಪದವಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳಲ್ಲಿ ರೈತರ ಮಕ್ಕಳಿಗೆ ನಿಗದಿಪಡಿಸಲಾಗಿದ್ದ ಮೀಸಲಾತಿಯನ್ನು ಹೆಚ್ಚಿಸಿರುವ ರಾಜ್ಯ ಸರಕಾರದ ತೀರ್ಮಾನ ಅತ್ಯಂತ ಸ್ವಾಗತಾರ್ಹ ಮತ್ತು ಸಮಯೋಚಿತವಾಗಿದೆ.
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಇನ್ನಿತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆಗಳಲ್ಲಿ ವಿವಿಧ ವರ್ಗಗಳಿಗೆ ಮೀಸಲಾತಿ ಇರುವಂತೆ ಬಿಎಸ್ಸಿ, ಕೃಷಿ. ಪಶುಸಂಗೋಪನೆ, ತೋಟಗಾರಿಕೆ ಸೇರಿ ಇತರ ಕೋರ್ಸ್‌ಗಳಲ್ಲಿ ರೈತರ ಮಕ್ಕಳಿಗೆ ಶೇ.40ರಷ್ಟು ಮೀಸಲಾತಿ ಇತ್ತು. ಈ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವ ಬಗ್ಗೆ 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಕೋರ್ಸ್‌ಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಿಸಿ, ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ನಿಗದಿಪಡಿಸಲಾಗಿದೆ. ಈ ಮೂಲಕ ಸರಕಾರ ಬಜೆಟ್‌ನಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದೆ.
ರಾಜ್ಯದಲ್ಲಿ ಸದ್ಯ ಬೆಂಗಳೂರು, ಧಾರವಾಡ, ರಾಯಚೂರು ಹಾಗೂ ಶಿವಮೊಗ್ಗ ಸೇರಿದಂತೆ 4 ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯಗಳು, ಬಾಗಲ ಕೋಟೆಯ ತೋಟಗಾರಿಕೆ ವಿವಿ, ಬೀದರ್‌ನ ಪಶುಸಂಗೋಪನಾ ವಿವಿ ಸೇರಿ ಕೃಷಿ ಸಂಬಂಧಿತ 6 ವಿಶ್ವವಿದ್ಯಾನಿಲಯಗಳಿವೆ. ಇಲ್ಲಿ ಪದವಿ ಹಾಗೂ ಡಿಪ್ಲೊಮಾದ 26ಕ್ಕೂ ಹೆಚ್ಚು ಕೋರ್ಸ್‌ಗಳು ಇವೆ. ಪ್ರತೀ ಶೈಕ್ಷಣಿಕ ವರ್ಷ ದಲ್ಲಿ ಅಂದಾಜು ನಾಲ್ಕು ಸಾವಿರ ಸೀಟುಗಳಿಗೆ ದಾಖಲಾತಿ ನಡೆಯುತ್ತದೆ. ಇದಕ್ಕಾಗಿ ಕನಿಷ್ಠ 1 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಈ ಕೃಷಿ ಸಂಬಂಧಿತ ಕೋರ್ಸ್‌ಗಳ ಒಟ್ಟು ಸೀಟುಗಳಲ್ಲಿ ರೈತರ ಮಕ್ಕಳಿಗೆ ಶೇ.50ರಷ್ಟು ಸೀಟುಗಳು ಸಿಗಲಿವೆ. ರೈತರ ಮಕ್ಕಳಿಗೆ ಮೀಸಲಾತಿ ನೀಡಬೇಕು ಎಂಬ ಉದ್ದೇಶದಿಂದ 2003-04ರಲ್ಲಿ ಶೇ.23.80ರಷ್ಟು ಕೃಷಿ ಕೋಟಾ ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು. ಅದನ್ನು 2015- 16ರಲ್ಲಿ ಶೇ.40ಕ್ಕೆ ಹೆಚ್ಚಿಸಲಾಯಿತು. ಈಗ ಅದನ್ನು ಶೇ.50ಕ್ಕೆ ಏರಿಕೆ ಮಾಡಲಾಗಿದೆ. ಈ ಪ್ರಕಾರ ರಾಜ್ಯದ 6 ಕೃಷಿ ಸಂಬಂಧಿತ ವಿವಿಗಳ ಒಟ್ಟು 2,460 ಸೀಟುಗಳಲ್ಲಿ 1,230 ಸೀಟುಗಳು ಕೃಷಿ ಕೋಟಾ ಮೀಸಲಾತಿಯಡಿ ಸಿಗುತ್ತವೆ. ಶೇ.10ರಷ್ಟು ಮೀಸಲಾತಿ ಹೆಚ್ಚಳದಿಂದ ಈ ಶೈಕ್ಷಣಿಕ ವರ್ಷದಲ್ಲಿ 247 ಸೀಟುಗಳು ಕೃಷಿ ಕೋಟಾದಲ್ಲಿ ಹೆಚ್ಚುವರಿಯಾಗಿ ಸಿಗಲಿವೆ.
ಕೃಷಿ ಕ್ಷೇತ್ರದಲ್ಲಿ ಕಾಲಕ್ಕೆ ಮತ್ತು ಬೇಡಿಕೆ ತಕ್ಕ ಸುಧಾರಣೆಗಳು, ಬೆಳವಣಿಗೆ ಗಳು ಕಾಣಬೇಕಾದರೆ ಕೃಷಿಗೆ ಸಂಬಂಧಿಸಿದಂತೆ ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳು ರೈತರ ನೆಲಗಳಿಗೆ ತಲುಪಬೇಕು ಅನ್ನುವ “ಲ್ಯಾಬ್ ಟು ಲ್ಯಾಂಡ್ “ಪರಿಕಲ್ಪನೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಇದೇ ಮಾದರಿಯಲ್ಲಿ ಸರಕಾರದ ಮಟ್ಟದಲ್ಲಿ ನಿಗದಿಯಾಗುವ ರೈತರ ಮಕ್ಕಳ ಮೀಸಲಾತಿ ಕೋಟಾ ವಿವಿಗಳ ಮಟ್ಟದಲ್ಲಿ ನಿಜ ಅರ್ಥದಲ್ಲಿ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಎದುರಾಗುವ ಕಾನೂನು ಮತ್ತು ಶೈಕ್ಷಣಿಕ ಅಡೆ-ತಡೆಗಳನ್ನು ಸರಕಾರ ಕಾಲಮಿತಿಯೊಳಗೆ ನಿವಾರಿಸಿಕೊಳ್ಳಬೇಕು.