Advertisement

ಮೀಸಲಾತಿ ಪ್ರಕಟ: ಗರಿಗೆದರಿದ ರಾಜಕೀಯ

04:27 PM Mar 12, 2020 | Suhan S |

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳಿಗೆ ಮತ್ತೆ ಜೀವಬಂದಿದೆ. ಎರಡೂ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಸ್ಥಳೀಯ ಮಟ್ಟದಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಲು ಮುಂದಾಗಿದ್ದಾರೆ.

Advertisement

ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಶಾಸಕರು ತಮಗೆ ಬೇಕಾದವರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದರಿಂದ ಈ ಎರಡೂ ಹುದ್ದೆಗಳು ಬಹಳ ಮಹತ್ವ ಪಡೆದುಕೊಂಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಗೋಕಾಕ, ಚಿಕ್ಕೋಡಿ, ರಾಯಬಾಗ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಉಳಿದ ಸ್ಥಳೀಯ ಸಂಸ್ಥೆಗಳಿಗಿಂತ ಹೆಚ್ಚು ಬಿರುಸುಗೊಂಡಿವೆ.

ಗೋಕಾಕದ ಮೇಲೆ ಎಲ್ಲರ ಕಣ್ಣು: ಗೋಕಾಕ ನಗರಸಭೆ ಈಗ ಮತ್ತೂಮ್ಮೆ ಎಲ್ಲರ ಗಮನಸೆಳೆಯಲಿದೆ. ಒಟ್ಟು 31 ಸದಸ್ಯರನ್ನು ಹೊಂದಿರುವ ಈ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿವೆ. ಈ ನಗರಸಭೆಯ ಮೇಲೆ ಜಾರಕಿಹೊಳಿ ಸಹೋದರರ ಅದರಲ್ಲೂ ಸಚಿವ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ್‌ ಪಾಟೀಲ ಅವರ ಹಿಡಿತ ಗಟ್ಟಿ ಯಾಗಿರುವುದರಿಂದ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಕುತೂಹಲ ಎಲ್ಲ ಸದಸ್ಯರು ಹಾಗೂ ಗೋಕಾಕ ಜನರಲ್ಲಿದೆ. ಎಲ್ಲ ಸದಸ್ಯರು ಪಕ್ಷೇತರ ಹೆಸರಿನಲ್ಲಿ ಚುನಾಯಿತರಾಗಿರುವುದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಊಹೆ ಕಷ್ಟಕರವಾಗಿದೆ. ಜಾರಕಿಹೊಳಿ ಬೆಂಬಲ ಇದ್ದವರಿಗೆ ಹಾಗೂ ಅಂಬಿರಾವ ಸಹಕಾರ ಇದ್ದವರಿಗೆ ಅದೃಷ್ಟ ಒಲಿಯಲಿದೆ ಎಂಬ ಮಾತುಗಳು ಗೋಕಾಕ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

‘ಈಗ ಲಭ್ಯವಿರುವ ಮಾಹಿತಿ ಪ್ರಕಾರ 31 ಸದಸ್ಯರಲ್ಲಿ 12 ಜನ ಸದಸ್ಯರು ಲಖನ್‌ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದ ಸದಸ್ಯರು ರಮೇಶ ಜಾರಕಿಹೊಳಿ ಅವರ ಗುಂಪಿನಲ್ಲಿದ್ದಾರೆ ಎನ್ನಲಾಗುತ್ತಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ರಮೇಶ ಅವರ ನಿರ್ಧಾರ ಅಂತಿಮ ಎಂದು ಮೂಲಗಳು ತಿಳಿಸಿವೆ.

ಖಾನಾಪುರದಲ್ಲಿ ಎಲ್ಲರೂ ಅಕಾಂಕ್ಷಿಗಳು: ಇನ್ನು ಖಾನಾಪುರ ಪಟ್ಟಣ ಪಂಚಾಯತದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವದರಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.

Advertisement

ಒಟ್ಟು 16 ಸದಸ್ಯರ ಬಲಾಬಲದ ಈ ಪಟ್ಟಣ ಪಂಚಾಯತ್‌ನಲ್ಲಿ 15 ಜನ ಪಕ್ಷೇತರರಾಗಿದ್ದು ಒಬ್ಬರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಚುನಾವಣೆಯ ವೇಳೆ ಸದಸ್ಯರು ಗುಂಪುಗಳನ್ನು ರಚಿಸಿಕೊಳ್ಳುವದರಿಂದ ಇಂಥವರೇ ಆಧ್ಯಕ್ಷರಾಗುತ್ತಾರೆ ಎಂದು ಹೇಳುವುದು ಕಷ್ಟ ಎನ್ನಲಾಗುತ್ತಿದೆ. ಆದರೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವದರಿಂದ ಇದರ ಮೇಲೆ ಕಣ್ಣಿಟ್ಟಿದ್ದ ಇತರರಿಗೆ ನಿರಾಸೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next