Advertisement
ಒಂದು ವರ್ಷದೀಚೆಗೆ 2 ಹಂತಗಳಲ್ಲಿ ಚುನಾವಣೆ ನಡೆದ 208 ಸ್ಥಳೀಯಾಡಳಿತಗಳ ಪೈಕಿ ಗರಿಷ್ಠ ಸಂಸ್ಥೆಗಳಲ್ಲಿ ಮೀಸಲಾತಿಗೆ ಆಕ್ಷೇಪಣೆ ಇಲ್ಲದ ಹಿನ್ನೆಲೆಯಲ್ಲಿ ಅಲ್ಲೆಲ್ಲ ಅಧಿಕಾರ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ.
ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿರುವ ಸ್ಥಳೀಯಾಡಳಿತಗಳಿಗೆ ವಿಚಾರಣೆ ಪೂರ್ಣಗೊಂಡ ಅನಂತರ ಅಧಿಕಾರ ನೀಡಬಹುದು. ಸಮಸ್ಯೆ ಇಲ್ಲದಿರುವ ಸ್ಥಳೀಯಾಡಳಿತಗಳ ಜನಪ್ರತಿನಿಧಿಗಳಿಗೆ ಅವಕಾಶ ನೀಡುವಂತೆ ಅಫಿದವಿತ್ ಮೂಲಕ ಮನವಿ ಮಾಡಲಾಗಿದೆ. ಈ ಸಂಬಂಧ ಮೂರು ಬಾರಿ ಅಧಿಕಾರಿಗಳು, ಕಾನೂನು ತಜ್ಞರ ಸಭೆ ಕರೆದು ಚರ್ಚಿಸಲಾಗಿದೆ. 15 ದಿನಗಳಲ್ಲಿ ಇದಕ್ಕೊಂದು ಸ್ಪಷ್ಟ ಉತ್ತರ ದೊರೆಯುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ಮಾಹಿತಿ ನೀಡಿವೆ. ಮೀಸಲಾತಿ ಬಿಕ್ಕಟ್ಟು
2018ರ ಆ. 31ರಂದು ಮೊದಲ ಹಂತದಲ್ಲಿ 109 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಸೆ. 3ರಂದು ಫಲಿತಾಂಶ ಪ್ರಕಟಗೊಂಡಿತ್ತು. ಬಳಿಕ ಮೀಸಲಾತಿ ಬದಲಾಯಿಸಿದ ಕಾರಣ ಆಕಾಂಕ್ಷಿಗಳು ನ್ಯಾಯಾಲಯದ ಮೆಟ್ಟಲೇರಿದ್ದರು. ಇದಾದ ಕೆಲವು ತಿಂಗಳುಗಳಲ್ಲಿ ಮೊದಲು ಪ್ರಕಟಿಸಿದ ಮೀಸಲಾತಿಯನ್ವಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸರಕಾರ ನ್ಯಾಯಾಲಯದ ಮುಂದೆ ಸಮ್ಮತಿಸಿತ್ತು. ಆದರೆ ಅದು ಜಾರಿಗೆ ಬಂದಿರಲಿಲ್ಲ. ಹೀಗಾಗಿ 7ಕ್ಕೂ ಅಧಿಕ ಸ್ಥಳೀಯಾಡಳಿತಗಳ ಪ್ರತಿನಿಧಿಗಳು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದಿನ್ನೂ ವಿಚಾರಣೆ ಹಂತದಲ್ಲಿದೆ. ಇದರ ನಡುವೆ ಸರಕಾರ ಎರಡನೇ ಹಂತದಲ್ಲಿ 103 ಸ್ಥಳೀಯ ಸಂಸ್ಥೆಗಳಿಗೆ, 2019ರ ಮೇ 29ಕ್ಕೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಿ ಮೇ 31ಕ್ಕೆ ಫಲಿತಾಂಶ ಪ್ರಕಟಿಸಿತ್ತು. ಮೊದಲ ಹಂತದ ಮೀಸಲಾತಿ ವಿಚಾರ ವಿಚಾರಣೆ ಯಲ್ಲಿರುವ ಕಾರಣ ಎರಡನೇ ಹಂತದಲ್ಲಿ ಚುನಾವಣೆ ನಡೆದ ಸ್ಥಳೀಯಾಡಳಿತಗಳಿಗೂ ಅಧಿಕಾರ ಸಿಗಲಿಲ್ಲ.
Related Articles
ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಅವಧಿ ಆರಂಭವಾಗುವುದು ಫಲಿತಾಂಶ ಪ್ರಕಟವಾದ ದಿನದಿಂದ ಅಲ್ಲ. ಸರಕಾರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ದಿನ ನಿಗದಿ ಮಾಡಿ ಚುನಾಯಿತ ಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿದ ದಿನದಿಂದ. ಹೀಗಾಗಿ ನ್ಯಾಯಾಲಯದ ತೀರ್ಪು ವಿಳಂಬವಾದರೂ ಸ್ಥಳೀಯಾಡಳಿತಗಳ ಐದು ವರ್ಷದ ಅವಧಿ ಮೊಟಕುಗೊಳ್ಳದು. ಪ್ರಕರಣ ಇತ್ಯರ್ಥವಾಗಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಸಮಯ ನಿಗದಿ ಆದ ದಿನದಿಂದ ಮುಂದಿನ ಐದು ವರ್ಷದ ತನಕ ಆಡಳಿತ ನಡೆಸಲು ಅವಕಾಶ ದೊರೆಯುತ್ತದೆ. ಮೀಸಲಾತಿ ಸಮಸ್ಯೆ ಇಲ್ಲದ ಸ್ಥಳೀಯಾಡಳಿತಗಳಿಗೆ ಮೊದಲು ಅವಕಾಶ ನೀಡಿದಲ್ಲಿ, ವಿಚಾರಣೆಯಲ್ಲಿರುವ ಸ್ಥಳೀಯಾಡಳಿತಕ್ಕೆ ಪೂರ್ಣ ಅವಧಿ ದೊರೆಯಲು ತೊಡಕು ಉಂಟಾಗಬಹುದು ಎನ್ನುವ ಸಮಸ್ಯೆ ಉದ್ಭವಿಸುವುದಿಲ್ಲ.
Advertisement
ದ.ಕ. ವಿವರಅವಿಭಜಿತ ದ.ಕ. ಜಿಲ್ಲೆಯಲ್ಲಿ ಉಳ್ಳಾಲ, ಪುತ್ತೂರು, ಉಡುಪಿ ನಗರಸಭೆಗಳು, ಬಂಟ್ವಾಳ, ಕಾರ್ಕಳ, ಕುಂದಾಪುರ, ಮೂಡುಬಿದಿರೆ ಪುರಸಭೆಗಳು, ಸಾಲಿಗ್ರಾಮ, ಸುಳ್ಯ, ಮೂಲ್ಕಿ ಪಟ್ಟಣ ಪಂಚಾಯತ್ ಮತ್ತು ಬೆಳ್ತಂಗಡಿ ನಗರ ಪಂಚಾಯತ್‌ಗಳಲ್ಲಿ ಮೊದಲ ಮತ್ತು ಎರಡನೇ ಹಂತದಲ್ಲಿ ಚುನಾವಣೆ ನಡೆದಿತ್ತು. ಬಂಟ್ವಾಳ ಮತ್ತು ಉಳ್ಳಾಲಗಳಲ್ಲಿ ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬಲ ಕಳೆದುಕೊಂಡ ಸ್ಥಳೀಯಾಡಳಿತ
ಮೊದಲ ಹಂತದ ಚುನಾವಣೆಯ ಫಲಿತಾಂಶ ಪ್ರಕಟಗೊಂಡು 1 ವರ್ಷ 2 ತಿಂಗಳು, ಎರಡನೇ ಹಂತದ ಚುನಾವಣೆ ನಡೆದು 5 ತಿಂಗಳು ಕಳೆದಿದೆ. ಆದರೆ ಜನರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಸ್ಪಂದಿಸಲು ಚುನಾಯಿತ ಪ್ರತಿನಿಧಿಗಳಿಗೆ ಸಾಧ್ಯವಾಗದೆ ತೊಂದರೆಯಾಗಿದೆ. ಈ ಹಿಂದಿನ ರಾಜ್ಯ ಸರಕಾರ ನ್ಯಾಯಾಲಯದಲ್ಲಿ ಹಳೆ ಮೀಸಲಾತಿಯನ್ನು ಪಾಲಿಸಲು ಒಪ್ಪಿಗೆ ಸೂಚಿಸಿತ್ತು. ಅದನ್ನು ಪಾಲಿಸದ ಕಾರಣ ಮತ್ತೆ ಕೆಲವು ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೊಸ ಸರಕಾರ ಮೀಸಲಾತಿ ಬಗ್ಗೆ ತಕರಾರು ಇಲ್ಲದ ಸ್ಥಳೀಯಾಡಳಿತಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಉಚ್ಚ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದ್ದು, 15 ದಿನಗಳೊಳಗೆ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು – ಕಿರಣ್ ಪ್ರಸಾದ್ ಕುಂಡಡ್ಕ