ದಾವಣಗೆರೆ: ದಲಿತ ನೌಕರರಿಗೆ ಮರಣ ಶಾಸನವಾಗಿರುವ ಬಡ್ತಿ ಮೀಸಲಾತಿ ರದ್ಧತಿ ತೀರ್ಪು ಹಿಂಪಡೆಯುವುದು, ರಾಜ್ಯ ಸರ್ಕಾರ ನೂತನ ವಿಧೇಯಕ ಜಾರಿಗೊಳಿಸುವ ಲಕ ಅರ್ಹರಿಗೆ ಅನುಕೂಲ ಮಾಡಿಕೊಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ(ದಾದಾ ಸಾಹೇಬ್ ಎನ್. ಮೂರ್ತಿ ಸ್ಥಾಪಿತ), ಸ್ಲಂ ಜನಾಂದೋಲನ, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಸರ್ವೋತ್ಛ ನ್ಯಾಯಾಲಯ ಕಳೆದ ಫೆ. 9 ರಂದು ಬಡ್ತಿ ಮೀಸಲಾತಿ ರದ್ಧುಪಡಿಸಿ, ಹೊರಡಿಸಿರುವ ತೀರ್ಪು ದಲಿತ ನೌಕರರಿಗೆ ಅಕ್ಷರಶಃ ಮರಣ ಶಾಸನವಾಗಿದೆ. ಸರ್ವೋತ್ಛ ನ್ಯಾಯಾಲಯದ ತೀರ್ಪಿನಿಂದ 2002 ರಿಂದ ಈವರೆಗೆ ಮುಂಬಡ್ತಿ ಪಡೆದಿರುವ ರಾಜ್ಯ ಸರ್ಕಾರದ ವಿವಿಧ 36 ಇಲಾಖೆಯ 12 ಸಾವಿರ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗಲಿದ್ದಾರೆ.
ರಾಜ್ಯ ಸರ್ಕಾರ ಸರ್ವೋತ್ಛ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ಕಾರಣ ಅರ್ಹ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸ್ವಾತಂತ್ರ ಬಂದಾಗನಿಂದಈವರೆಗೆ ಮೀಸಲಾತಿ, 1978 ರಿಂದ ಬಡ್ತಿ ಮೀಸಲಾತಿ ಜಾರಿಯಲ್ಲಿ ತೋರುತ್ತಿರುವ ಅತೀವ ವಿಳಂಬ ನೀತಿ ಅರ್ಹ ದಲಿತ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ.
ಕೇಂದ್ರ ಸರ್ಕಾರ ಬಡ್ತಿ ಮೀಸಲಾತಿ ವಿಚಾರವನ್ನು ಲೋಕಸಭೆಯಲ್ಲಿ ಮಂಡಿಸಿ, ಸಂವಿಧಾನದ 117ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಬಡ್ತಿ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಅರ್ಹ ದಲಿತ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುವ ಕುರಿತಂತೆ ರಾಜ್ಯ ಸರ್ಕಾರ ಸರ್ವೋತ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಜೊತೆಗೆ ಈ ಬಜೆಟ್ ಅಧಿವೇಶನದಲ್ಲಿ ಬಡ್ತಿ ಮೀಸಲಾತಿ ಕುರಿತಂತೆ ನೂತನ ವಿಧೇಯಕ ಮಂಡಿಸಿ, ಅಂಗೀಕರಿಸಿ, ಸಂವಿಧಾನದ 9ನೇ ಅನುಚ್ಛೇದದಲ್ಲಿ ಸೇರಿಸುವತ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಸ್ವಾಮ್ಯದ ಇಲಾಖೆಯಂತೆ ಖಾಸಗಿ ವಲಯದ ಎಲ್ಲಾ ಹುದ್ದೆಯಲ್ಲಿ ಮೀಸಲಾತಿ ಸೌಲಭ್ಯ ಒದಗಿಸುವಂತಹ ಮಸೂದೆ ಜಾರಿಗೆ ತರಬೇಕು. ಜನಸಂಖ್ಯೆ ಆಧಾರದಲ್ಲಿ ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಸೌಲಭ್ಯ ಒದಗಿಸುವ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಟಾನಕ್ಕೆ ತರಬೇಕು ಎಂದು ಕೋರಿದರು. ದಸಂಸ ಜಿಲ್ಲಾ ಅಧ್ಯಕ್ಷ ಎನ್. ಮಲ್ಲೇಶ್ ಕುಕ್ಕುವಾಡ, ರೇಣುಕ ಯಲ್ಲಮ್ಮ ಹಾವೇರಿ, ಜಿ.ಎಚ್. ಪ್ರಭುಲಿಂಗಪ್ಪ, ಐಗೂರು ಅಂಜಿನಪ್ಪ, ತಮ್ಮಣ್ಣ, ಶಿಲ್ಪಾ, ಗೌರಮ್ಮ, ನನ್ನುಸಾಬ್, ಆಸೀಫ್‌ಸಾಬ್, ಮಂಜು, ಶ್ರೀನಿವಾಸ್ ಇದ್ದರು.