Advertisement

ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ

07:20 AM Sep 24, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಭಿನ್ನಮತ ಶಮನವಾಗಿ ಎಲ್ಲವೂ ಸರಿಹೋಗಿದೆ ಎನ್ನುವಷ್ಟರಲ್ಲಿ ಮತ್ತೆ ಅಸಮಾಧಾನ ಹೊಗೆಯಾಡಿದೆ. ಬೂತ್‌ ಕಮಿಟಿಗಳಿಗೆ ಸಂಬಂಧಿಸಿದಂತೆ ಪಕ್ಷದಲ್ಲಿ ರಚಿಸಲಾಗಿರುವ ಬೂತ್‌ ಸಮಿತಿ ಸಭೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಈ ಹಿಂದೆ ಮುನಿಸಿಕೊಂಡಿದ್ದ ಬಣ ಗೈರುಹಾಜರಾಗುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಹೋಗಿಲ್ಲ ಎಂಬ ಸಂದೇಶ ರವಾನಿಸಿದೆ.

Advertisement

ಬೂತ್‌ ಸಮಿತಿಯ ಸದಸ್ಯರಾಗಿರುವ ಭಾನುಪ್ರಕಾಶ್‌, ಎಂ.ಬಿ.ನಂದೀಶ್‌, ಗಿರೀಶ್‌ ಪಟೇಲ್‌ ಸೇರಿ ಹಲವರು ಶನಿವಾರ ನಡೆಸಿದ ಬೂತ್‌ ಸಮಿತಿ ಸಭೆಗೆ ಗೈರು ಹಾಜರಾಗಿದ್ದಾರೆ. ಮೂಲಗಳ ಪ್ರಕಾರ ಇವರೆಲ್ಲರೂ ಸಭೆಗೆ ಆಗಮಿಸಲು ಸಿದ್ಧರಿದ್ದರೂ ಶುಕ್ರವಾರ ರಾತ್ರಿ ಕೆಲವರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಬಾರದಂತೆ ಹೇಳಿರುವ ಹಿನ್ನೆಲೆಯಲ್ಲಿ ಅವರು ಗೈರಾಗಿದ್ದರು ಎಂದು ಹೇಳಲಾಗಿದೆ.
ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ಮೂಲಗಳು, ಪಕ್ಷದ ವತಿಯಿಂದ ಯಾರಿಗೂ ದೂರವಾಣಿ ಕರೆ ಮಾಡಿ ಸಭೆಗೆ ಹಾಜರಾಗದಂತೆ ಸೂಚಿಸಿಲ್ಲ. ಇದೆಲ್ಲವೂ ಕಪೋಲ ಕಲ್ಪಿತ. ಅನಗತ್ಯವಾಗಿ ಗೊಂದಲ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿವೆ. ಆದರೆ, ಸಭೆಗೆ ಕೆಲವರು ಗೈರಾಗಿರುವುದು ಪಕ್ಷದಲ್ಲಿ ಇನ್ನೂ ಅಸಮಾಧಾನ ಉಳಿದುಕೊಂಡಿದೆ ಎಂಬುದು ಸಾಬೀತಾಗಿದೆ.

ರಾಜ್ಯದಲ್ಲಿ 36 ಸಂಘಟನಾ ಜಿಲ್ಲೆಗಳಿದ್ದು, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್‌ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ನೇತೃತ್ವದಲ್ಲಿ ಪ್ರತಿ ಜಿಲ್ಲೆಗೊಬ್ಬ ಬೂತ್‌ ಕಮಿಟಿ ಉಸ್ತುವಾರಿ ಯನ್ನು ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೇಡರ್‌ ಮಟ್ಟದಿಂದ ಬಂದಿರುವವರಿಗೆ ಆದ್ಯತೆ ನೀಡಲಾಗಿದೆ. ಶನಿವಾರ ಈ ಸಮಿತಿಯ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಈ 36 ಮಂದಿಯ ಜತೆಗೆ ಇನ್ನೂ 36 ಮಂದಿ ಸಹ ಉಸ್ತುವಾರಿಗಳು ಸೇರಿದಂತೆ ಸುಮಾರು 75 ಮಂದಿಯನ್ನು ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಈ ಹಿಂದೆ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಕೆಲವರಿಗೆ ಬಿಜೆಪಿ ರಾಜ್ಯ ಕಚೇರಿ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಸಭೆಗೆ ಬಾರದಂತೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದವರು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಸಭೆಗೆ ಗೈರುಹಾಜರಾದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರಾರೂ ಕರೆ ಸ್ವೀಕರಿಸಲಿಲ್ಲ.

ಸಂತೋಷ್‌ಗೆ ಆದ್ಯತೆ ನೀಡುತ್ತಿರುವುದೇ ಕಾರಣ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದು ಹೋದ ಮೇಲೆ ಬಿ.ಎಲ್‌.ಸಂತೋಷ್‌ ಅವರಿಗೆ ಪ್ರಾಶಸ್ತ್ಯ ನೀಡುತ್ತಿರುವುದು ಕೆಲವರಲ್ಲಿ ಅಸಮಾಧಾನ ಉಂಟುಮಾಡಿದೆ. ಈ ಮಧ್ಯೆ ಬೂತ್‌ ಸಮಿತಿಯಲ್ಲಿ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದವರಿಗೆ ಆದ್ಯತೆ ನೀಡಿರುವುದು ಈ ಅಸಮಾಧಾನ ಹೆಚ್ಚುವಂತೆ ಮಾಡಿತ್ತು. ಈ ಕಾರಣಕ್ಕಾಗಿ ಸಂತೋಷ್‌ ಬೆಂಬಲಿಗರು ಎನ್ನಲಾಗುತ್ತಿರುವ ಕೆಲವರನ್ನು ರೊಚ್ಚಿಗೆಬ್ಬಿಸಿ ಪಕ್ಷದ ವಿರುದ್ಧ ಮಾತನಾಡುವಂತೆ ಮಾಡಲು ಸಭೆಗೆ ಬಾರದಂತೆ ದೂರವಾಣಿ ಕರೆ ಮಾಡಿ ಹೇಳಿದ್ದರು. ರೊಚ್ಚಿಗೆದ್ದು ಪಕ್ಷದ ರಾಜ್ಯ ನಾಯಕರ ವಿರುದ್ಧ ಮಾತನಾಡಿದರೆ “ಸಂತೋಷ್‌ ಅವರ ಬೆಂಬಲಿಗರು ಈ ರೀತಿ ಮಾಡು ತ್ತಿದ್ದಾರೆ’ ಎಂದು ವರಿಷ್ಠರಿಗೆ ದೂರು ನೀಡುವ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next