ನವದೆಹಲಿ: ಅಗಾಧ ಸಮುದ್ರದ ಆಳದಲ್ಲಿ ಅಷ್ಟೇ ವಿಸ್ಮಯಕಾರಿ, ಅಗಾಧ ಜಗತ್ತೂಂದಿದೆ. ಅಲ್ಲಿ ಬಗೆದಷ್ಟೂ ಹೊಸಹೊಸ ಸಂಗತಿಗಳು ಪ್ರಕಟವಾಗುತ್ತಲೇ ಇರುತ್ತವೆ. ಇತ್ತೀಚೆಗೆ ಅಮೆರಿಕದ ಮಿಯಾಮಿ ವಿವಿಯ ವಿಜ್ಞಾನಿಗಳ ತಂಡ, ಕೆಂಪುಸಮುದ್ರದ ಆಳದಲ್ಲಿ ತೀವ್ರ ಉಪ್ಪುನೀರಿನಿಂದ ಕೂಡಿರುವ ಕೊಳಗಳನ್ನು ಪತ್ತೆಹಚ್ಚಿದ್ದಾರೆ.
ಇಲ್ಲಿ ಮನುಷ್ಯರಾಗಲೀ, ಸಮುದ್ರದ ಇತರೆ ಭಾಗಗಳಲ್ಲಿರುವ ಜೀವಿಗಳಾಗಲೀ ಬದುಕಲು ಸಾಧ್ಯವೇ ಇಲ್ಲ! ಅಂತಹದ್ದೊಂದು ಕಠಿಣ ಪರಿಸ್ಥಿತಿ ಅಲ್ಲಿದೆ ಎಂದು ಪ್ರೊ.ಸ್ಯಾಮ್ ಪರ್ಕಿನ್ಸ್ ಹೇಳಿದ್ದಾರೆ.
ಹೇಗಿದೆ ಪರಿಸ್ಥಿತಿ?: ಕೆಂಪು ಸಮುದ್ರದಲ್ಲಿ ವಿಜ್ಞಾನಿಗಳ ತಂಡ ಪತ್ತೆಹಚ್ಚಿರುವ ಒಂದು ಕೊಳದ ಆಳ 5,807 ಅಡಿಗಳಿಷ್ಟಿದೆ, ಉದ್ದ ಕೇವಲ 10 ಅಡಿ. ಇದನ್ನು ಸಮುದ್ರದಾಳಕ್ಕೆ ಪ್ರವೇಶಿಸಬಲ್ಲ ಆರ್‌ಒವಿ ಎಂಬ ಸಾಧನ ಪತ್ತೆಹಚ್ಚಿದೆ. ಈ ಕೊಳದಲ್ಲಿರುವ ನೀರು ವಿಪರೀತ ಉಪ್ಪಿನಿಂದ ಕೂಡಿದೆ. ಜೊತೆಗೆ ಆಮ್ಲಜನಕದ ಸುಳಿವೇ ಇಲ್ಲ.
ಹಾಗಾಗಿ ಇಲ್ಲಿ ಉಳಿದ ಜೀವಿಗಳು ಉಸಿರಾಡಲಾಗದೇ ನಿಮಿಷ ಮಾತ್ರದಲ್ಲಿ ಪ್ರಾಣ ಕಳೆದುಕೊಳ್ಳುತ್ತವೆ. ಇಷ್ಟಿದ್ದರೂ ಈ ಕೊಳದಲ್ಲಿ ಅಲ್ಲಿನದ್ದೇ ಪರಿಸರಕ್ಕೆ ಹೊಂದಿಕೊಂಡಿರುವ ಒಂದಷ್ಟು ಜೀವಿಗಳಿವೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಸಮುದ್ರದ ಮೂಲ ಪತ್ತೆಗೆ ನೆರವು:
ಭೂಮಿಯಲ್ಲಿ ಜೀವರಾಶಿ ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಈಗಲೂ ವಿಜ್ಞಾನಿಗಳು ಸಂಶೋಧನೆ ಮಾಡುತ್ತಲೇ ಇದ್ದಾರೆ. ಪ್ರಸ್ತುತ ಸಂಶೋಧನೆಯಿಂದ, ಭೂಮಿಯಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಪತ್ತೆಹಚ್ಚಲು ಒಂದು ಸಣ್ಣ ಸುಳಿವು ಸಿಕ್ಕಿದಂತಾಗಿದೆ.