Advertisement

ರೇಣುಕಾಚಾರ್ಯ ಜಯಂತಿಗೆ ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಆಕ್ಷೇಪ

01:32 PM Mar 26, 2022 | Team Udayavani |

ವಿಜಯಪುರ : ವಾಸ್ತವಿಕವಾಗಿ ರೇಣುಕಾಚಾರ್ಯ ಎಂಬ ವ್ಯಕ್ತಿಯೇ ಇಲ್ಲದಿದ್ದರೂ ರಾಜ್ಯ ಸರ್ಕಾರ ರೇಣುಕಾಚಾರ್ಯ ಜಯಂತಿ ಆಚರಿಸುವ ಕುರಿತು ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ, ಇದರಿಂದ ಹಾಲುಮತದ ಐತಿಹಾಸಿಕ ಕುಲಗುರು ರೇವಣಸಿದ್ಧರಿಗೆ ಮಾಡುವ ಅವಮಾನ ಎಂದು ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಆಕ್ಷೇಪಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರಕಾರ ರಾಜ್ಯದಾದ್ಯಂತ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸುವ ಕುರಿತು ಮಾ.16 ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಸದರಿ ಜಯಂತಿಯ ಆಚರಣೆಗೆ ತಗಲುವ ವೆಚ್ಚವನ್ನು 2021-22ನೇ ಸಾಲಿನಲ್ಲಿ ಮಹಾಪುರುಷರ ಜಯಂತಿಗಳ ಆಚರಣೆಯ ಅನುದಾನದಲ್ಲಿ ಬಳಸಿಕೊಳ್ಳುವಂತೆ ಅದಿನ ಕಾರ್ಯದರ್ಶಿ ಕೆ.ಆರ್.ರಮೇಶ ಆದೇಶ ಹೊರಡಿಸಿದ್ದಾರೆ. ವಾಸ್ತವದಲ್ಲಿ ರೇಣುಕಾಚಾರ್ಯ ಎಂಬ ವ್ಯಕ್ತಿಯೇ ಇಲ್ಲ ಎಂದು ಚಂದ್ರಕಾಂತ ಬಿಜ್ಜರಗಿ ವಾದಿಸಿದ್ದಾರೆ.

ಅನೇಕ ಶಾಸನಗಳಲ್ಲಿ ಉಲ್ಲೇಖಿತನಾದ, 12ನೇ ಶತಮಾನದ ಹಾಲುಮತದ ಕುಲಗುರು ಜಗದ್ಗುರು ರೇವಣಸಿದ್ಧೇರ್ಶವರರು ಐತಿಹಾಸಿಕ ವ್ಯಕ್ತಿ. ಜಗದ್ಗುರು ರೇವಣಸಿದ್ಧೇಶ್ವರರನ್ನೇ ಆದಿರೇಣುಕ, ರೇಣುಕ, ರೇಣುಕಾಚಾರ್ಯ, ರೇಣುಕಾರಾಧ್ಯ ಮುಂತಾದ ಕಲ್ಪಿತ-ಪೌರಾಣಿಕ ನಾಮಗಳನ್ನು ಸೃಷ್ಟಿಸಿ, ರೇವಣಸಿದ್ಧನ ನಾಮವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆದಿರೇಣುಕ, ರೇಣುಕ, ರೇಣುಕಾಚಾರ್ಯ, ರೇಣುಕಾರಾಧ್ಯ ಮುಂತಾದ ನಾಮಗಳು ಕಲ್ಪಿತ ಪೌರಾಣಿಕ ನಾಮಗಳು ಎಂದು ವಿವರಿಸಿದ್ದಾರೆ.

ಜಗದ್ಗುರು ರೇವಣಸಿದ್ಧರೇ ಐತಿಹಾಸಿಕ ವ್ಯಕ್ತಿ ಎಂದು ವೀರಶೈವ ಸಮುದಾಯದ ಖ್ಯಾತ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ, ಡಾ.ಎಂ.ಎಂ.ಕಲಬುರ್ಗಿ ಸೇರಿದಂತೆ ವೀರಶೈವ ಸಮುದಾಯದ ಹಲವು ವಿದ್ವಾಂಸರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಲ್ಪಿತ-ಪೌರಾಣಿಕ ರೇಣುಕಾಚಾರ್ಯನ ಜಯಂತಿ ಆಚರಿಸಲು ಸರಕಾರ ಆದೇಶ ಹೊರಡಿಸುವುದರಿಂದ ನಿಜವಾದ ಐತಿಹಾಸಿಕ ಜಗದ್ಗುರು ಶ್ರೀ ರೇವಣಸಿದ್ಧನಿಗೆ ಸಿಗಬೇಕಾದ ಗೌರವ ತಪ್ಪಿಸಿರುವ ಹಾಲಿ ಸರಕಾರ ಹಾಲುಮತ ಧರ್ಮಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದ್ದಾರೆ.

ನಮ್ಮ ಧರ್ಮಕ್ಕೆ ಮಾಡುತ್ತಿರುವ ಇಂಥ ಅವಮಾನಗಳನ್ನು ಹಾಲುಮತ ಸಮಾಜ ಖಂಡಿಸುತ್ತಿದ್ದು, ಬರುವ ವರ್ಷದಿಂದ ಸರ್ಕಾರವೇ ಜಗದ್ಗುರು ಶ್ರೀರೇವಣಸಿದ್ಧರ ಜಯಂತಿ ಸರಕಾರವೇ ಆಚರಿಸಲು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಹಾಲುಮತ ಧರ್ಮದಿಂದ ರಾಜ್ಯಾದಾಧ್ಯಂತ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next