ಧಾರವಾಡ: ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಕವಿವಿ ಆವರಣದಲ್ಲಿ ಭಿಕ್ಷಾಟನೆ ಮೂಲಕ ಗುರುವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಬಿಕ್ಷಾಟನೆ ಮಾಡಿ ಗಮನ ಸೆಳೆದರೆ, ವಿದ್ಯಾರ್ಥಿನಿಯರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಕಳೆದ ದಿನಗಳಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಬೇಕು. 6 ಸಾವಿರ ಪೆಲೋಶಿಪ್ ಹೆಚ್ಚಿಸಬೇಕು. ಕವಿವಿಯ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಕವಿವಿಯ ಎಲ್ಲ ವಿಭಾಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಭದ್ರತೆ ನೀಡಬೇಕು. ಹೊರ ವಾಹನಗಳನ್ನು ಸ್ಥಗಿತ ಮಾಡಬೇಕು. ವಿಕಲಚೇತನ ವಿದ್ಯಾರ್ಥಿಗಳಿಗೆ ಕವಿವಿಯಲ್ಲಿ ಲಿಪ್ಟ್ವ್ಯ ವಸ್ಥೆ ಮಾಡಬೇಕು. ಸಂಶೋಧನಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಸಂಶೋಧನಾ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆ 5.30ರವರೆಗೂ ಪ್ರತಿಭಟನೆ ನಡೆಸಿದ್ದರೂ ಕವಿವಿ ಆಡಳಿತ ಅಧಿಕಾರಿಗಳು ಸ್ಪಂದಿಸದೇ ಇದ್ದಾಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಕವಿವಿ ಆಡಳಿತ ಅಧಿಕಾರಿಗಳನ್ನು ತರಾಟೆಗೆ ತೆಗುದುಕೊಂಡರು.
ಈ ವೇಳೆ ಕವಿವಿ ಅಧಿಕಾರಿಗಳು 15 ದಿನದೊಳಗಾಗಿ ಸಂಶೋಧನಾ ವಿದ್ಯಾರ್ಥಿಗಳ 20ಕ್ಕೂ ಹೆಚ್ಚಿನ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಲಿಖೀತ ಭರವಸೆ ನೀಡಿದರು. ಈ ವೇಳೆ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. 15 ದಿನದಲ್ಲಿ ಕವಿವಿ ವಿದ್ಯಾರ್ಥಿಗಳ ಎಲ್ಲ ಭರವಸೆಗಳನ್ನು ಈಡೇರಿಸದ್ದಿದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕವಿವಿ ಸಂಶೋಧನಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜು ಹೊಂಗಲ, ಅಮೀತ ಶಿಂಧೆ, ಪಲ್ಲವಿ, ನೇಹಾ ನಾಯಕ, ಮಾದವಿ ನಂದಿಮಠ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.