Advertisement

ಪ್ರವಾಸವಾಗ‌ದಿರಲಿ ಸಂಶೋಧನೆ

08:57 AM Jan 28, 2019 | Team Udayavani |

ವಾಡಿ: ಇತಿಹಾಸ ಸಂಶೋಧನೆ ಎನ್ನುವುದು ವಿವಿ ವಿದ್ಯಾರ್ಥಿಗಳ ಪಾಲಿಗೆ ಕೇವಲ ಪ್ರವಾಸ ಪರ್ಯಟನೆ ಆಗಬಾರದು. ಅದೊಂದು ಸತ್ಯದ ಹುಡುಕಾಟವಾಗಿ, ಮುಚ್ಚಿದ ಇತಿಹಾಸ ಬೆಳಕಿಗೆ ತರುವ ಪ್ರಾಮಾಣಿಕ ಪ್ರಯತ್ನವಾಗಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ ಹೇಳಿದರು.

Advertisement

ಸನ್ನತಿ ಬೌದ್ಧಸ್ತೂಪ ಸ್ಥಳಕ್ಕೆ ಭೇಟಿ ನೀಡಿದ ಗುಲಬರ್ಗಾ, ತುಮಕೂರು ಹಾಗೂ ಶಿವಮೊಗ್ಗಾದ ಕುವೆಂಪು ವಿಶ್ವವಿದ್ಯಾಲಯಗಳ ಇತಿಹಾಸ ಸಂಶೋಧನಾ ಕೇಂದ್ರಗಳ ನೂರಾರು ವಿದ್ಯಾರ್ಥಿಗಳಿಗೆ ಸನ್ನತಿ ಬೌದ್ಧ ಶಿಲಾಶಾಸನ ಅಧ್ಯಯನ ಪ್ರವಾಸ ಉದ್ದೇಶಿಸಿ ಅವರು ಮಾತನಾಡಿದರು. ಸೈನ್ಸ್‌ ಮತ್ತು ಇಂಜಿನಿಯರಿಂಗ್‌ ಪ್ರವೇಶ ವಂಚಿತರಾಗಿ ಕಲಾ (ಆರ್ಟ್ಸ್)ವಿಷಯ ಅಧ್ಯಯನಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಮನದಲ್ಲಿ ಯಾವುದೇ ರೀತಿಯ ಮಾನಸಿಕ ಕೊರಗು ಕಾಡಬಾರದು. ಸಿಕ್ಕ ಅವಕಾಶಗಳನ್ನು ಆಸಕ್ತಿಯಿಂದ ಬಳಕೆಮಾಡಿಕೊಳ್ಳಬೇಕು. ಇತಿಹಾಸ ಸಂಶೋಧನಾ ಅಧ್ಯಯನದಲ್ಲೂ ಸಾಧನೆ ಮಾಡಲು ಹೆಚ್ಚು ಅವಕಾಶಗಳಿವೆ ಎಂದರು.

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎನ್ನುವ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಮಾತನ್ನು ಪ್ರತಿಯೊಬ್ಬ ವಿವಿ ವಿದ್ಯಾರ್ಥಿಯೂ ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಆಕ್ರಮಣಕಾರಿ ಧೊರಣೆಗಳಿಂದ ಮುಚ್ಚಿಹೋದ ಘತಕಾಲದ ಇತಿಹಾಸಗಳನ್ನು ಮತ್ತೆ ಬಿಚ್ಚಿಡುವ ಸಾಹಸ ತೋರಬೇಕು ಎಂದರು.

ಸನ್ನತಿ ಸಮೀಪದ ಭೀಮಾನದಿ ದಡದಲ್ಲಿರುವ ಕನಗನಹಳ್ಳಿ ಗ್ರಾಮದ ಪರಿಸರದಲ್ಲಿ ಉತVನನ ಮೂಲಕ ಭಗ್ನಾವಶೇಷಗಳ ರೂಪದಲ್ಲಿ ದೊರೆತಿರುವ ಬೌದ್ಧ ಶಿಲಾಶಾಸನಗಳು, ಬುದ್ಧನ ಮೂರ್ತಿಗಳು ಹಾಗೂ ಇಲ್ಲಿನ ಬೌದ್ಧ ಸ್ತೂಪ ಸಾಮ್ರಾಟ್ ಅಶೋಕ ಚಕ್ರವರ್ತಿ ಕಾಲಘಟ್ಟದ ಇತಿಹಾಸ ಹೇಳುತ್ತಿವೆ. ಪ್ರತಿಯೊಂದು ಶಿಲಾಮೂರ್ತಿ ಬೌದ್ಧ ಧಮ್ಮದ ಕಥೆ ಹೇಳುತ್ತಿವೆ. ಇವುಗಳನ್ನು ಸರಿಯಾಗಿ ಅಧ್ಯಯನ ಮಾಡಿ, ಪ್ರಬಂಧ ಮಂಡಿಸಿ ಬೆಳಕು ಚೆಲ್ಲಬೇಕು ಎಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬೆಂಗಳೂರು ಮಹಾಬೋ ಸೊಸೈಟಿಯ ಬೌದ್ಧ ಭಿಕ್ಷು ಬುದ್ಧದತ್ತಾ ಸಾನ್ನಿಧ್ಯ, ವಾಡಿ ನವಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ರಿಜಿಸ್ಟಾರ್‌ ಪ್ರೊ| ಭೋಜ್ಯಾ ನಾಯಕ್‌, ತುಮಕೂರು ವಿವಿಯ ಪ್ರೊ| ಕೆ.ಎನ್‌. ಗಂಗಾನಾಯಕ, ಕಾರ್ಯಾಗಾರ ಆಯೋಜಕರಾದ ಪ್ರೊ| ಜಿ. ಸರ್ವಮಂಗಳ, ಪ್ರೊ| ಮಂಜುಳಾ ಬಿ.ಚಿಂಚೋಳಿ, ಇಂಗಳಗಿ ಗ್ರಾಪಂ ಸದಸ್ಯ ಸುಭಾಷ ಯಾಮೇರ, ಮನೋಜಕುಮಾರ ಹಿರೋಳಿ, ಉದಯಕುಮಾರ ಯಾದಗಿರಿ ಹಾಗೂ ಗುಲಬರ್ಗಾ, ತುಮಕೂರು, ಶಿವಮೊಗ್ಗಾ ವಿವಿಗಳ ಪಿಎಚ್‌ಡಿ ಮತ್ತು ಎಂ.ಎ ಅಧ್ಯಯನದ 150 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

ಪ್ರೊ| ಉದಯರವಿ ಮೂರ್ತಿ ನಿರೂಪಿಸಿ, ವಂದಿಸಿದರು. ಛಾಯಾಚಿತ್ರಗಳ ಸಮೇತ ವಿದ್ಯಾರ್ಥಿಗಳು ಸನ್ನತಿ ಬೌದ್ಧ ಶಿಲೆಗಳು ಮತ್ತು ಶಾಸನಗಳ ಪರಿಶೀಲನೆ ಮಾಡುವ ಮೂಲಕ ಮಾಹಿತಿ ಕಲೆಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next