Advertisement

ಸಂಶೋಧನೆ; ಮರೆಗುಳಿ ಶುರುವಿನಲ್ಲಿ ಪತ್ತೆಗೆ ಫ್ಲೋರೋಜೆನಿಕ್‌ ತಂತ್ರ

11:21 AM Jul 21, 2023 | Team Udayavani |

ಬೆಂಗಳೂರು: ಹಿರಿಯ ನಾಗರಿಕರ ಬದುಕನ್ನು ನರಕವನ್ನಾಗಿಸುವ ಅಲಜೈಮರ್‌ (ಮರೆಗುಳಿ) ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ವಿಜ್ಞಾನಿಗಳು ಫ್ಲೋರೋಜೆನಿಕ್‌ ತನಿಖೆ ಎಂಬ ಹೊಸ ತಂತ್ರವನ್ನು ಕಂಡುಹಿಡಿದಿದ್ದಾರೆ.

Advertisement

ಮರೆಗುಳಿ ರೋಗ ಆರಂಭಗೊಳ್ಳುವ ಎರಡು ದಶಕದ ಮೊದಲೇ ರೋಗದ ಲಕ್ಷಣಗಳು ಕಂಡುಬರುತ್ತವೆ ಎಂದು ಕೆಲ ಸಂಶೋಧನೆಗಳು ಹೇಳುತ್ತಿವೆ. ಆದರೆ ಆ ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವ ವಿಧಾನಗಳು ಇನ್ನೂ ಕಾರ್ಯರೂಪಕ್ಕೆ
ಬಂದಿಲ್ಲ. ಪ್ರಸ್ತುತ ಎಂಆರ್‌ಐ, ಪಿಇಟಿ ಮತ್ತು ಸಿಟಿ ಸ್ಕ್ಯಾನ್‌ ನಂತಹ ಸಾಂಪ್ರಾದಾಯಿಕ ಪರೀಕ್ಷಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆದರೆ, ಈ ವಿಧಾನಗಳಿಂದ ಮರೆಗುಳಿ ರೋಗವನ್ನು ಆರಂಭದಲ್ಲೇ ಅಥವಾ ರೋಗ ಲಕ್ಷಣಗಳು ಪ್ರಾರಂಭವಾಗುತ್ತಿರುವಾಗ ಪತ್ತೆ ಹಚ್ಚಲು ಸಾಧ್ಯವಿಲ್ಲ.

ಹಾಗೆಯೇ ಈ ಪರೀಕ್ಷೆಗಳು ಸಂಕೀರ್ಣ, ದುಬಾರಿ ಮತ್ತು ನಿಖರ ಫ‌ಲಿತಾಂಶ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಐಐಎಸ್‌ಸಿಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗ (ಐಪಿಸಿ)ದ ಸಂಶೋಧಕರು ಮರೆಗುಳಿ ರೋಗವನ್ನು ನಿಖರವಾಗಿ ಆರಂಭದಲ್ಲೇ ಪತ್ತೆಹಚ್ಚುವ ದುಬಾರಿಯಲ್ಲದ ಫ್ಲೋರೋಜೆನಿಕ್‌ ತಂತ್ರವನ್ನು ಸಂಶೋಧಿಸಿದ್ದಾರೆ.

ಮರೆಗುಳಿ ರೋಗದ ಲಕ್ಷಣವನ್ನು ಸೂಚಿಸುವ ನಿರ್ದಿಷ್ಟ ಕಿಣ್ವವೊಂದನ್ನು ಆಣಿcಕ ಫ್ಲೋರೋಜೆನಿಕ್‌ ಪರೀಕ್ಷೆಗೆ ಒಳಪಡಿಸಿ ರೋಗ ಪತ್ತೆ ಹಚ್ಚಬಹುದು ಎಂದು ಐಪಿಸಿಯ ಸಹಾಯಕ ಪ್ರೊಫೆಸರ್‌ ದೆಬಾಶಿಶ್‌ ದಾಸ್‌ ಮತ್ತು ಡಾಕ್ಟರೆಟ್‌ವೊತ್ತರ ವಿದ್ಯಾರ್ಥಿ ಜಗಪ್ರೀತ್‌ ಸಿಧು ಕಂಡುಕೊಂಡಿದ್ದಾರೆ. ಅಕ್ಟೈಲ್‌ಕೊಲಿನೆಸ್ಟ್ರೇಸ್‌ (ಎಸಿಎಚ್‌ಇ) ಎಂಬ ಕಿಣ್ವವನ್ನು ಫ್ಲೋರೋಜೆನಿಕ್‌ ತನಿಖೆಗೆ ಒಳಪಡಿಸಿದರೆ ಅಲ್ಜೈಮರ್‌ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಬಹುದು. ಈ ಪರೀಕ್ಷೆಗೆ ಸಣ್ಣ ಕಿಟ್‌ ಸಾಕು ಎಂದು ದೆಬಾಶಿಶ್‌ ದಾಸ್‌ ಹೇಳುತ್ತಾರೆ.

ಹೆಚ್ಚಾಗಿ ಮೆದುಳಿನ ಕೋಶಗಳು ಇತರ ಕೋಶಗಳಿಗೆ ನಿರ್ದಿಷ್ಟ ಕೆಲಸ ಮಾಡುವ ಸೂಚನೆ ನೀಡುತ್ತವೆ. ಅಕ್ಟೈಲ್‌ಕೊಲಿನ್‌ ಸಹ ಇಂತಹ ನಿರ್ದಿಷ್ಟ ಸೂಚನೆಯನ್ನು ರವಾನಿಸುವ ಕೋಶ. ನಮ್ಮ ನರವ್ಯೂಹದಲ್ಲಿ ಇದರ ಮಟ್ಟವನ್ನು ಎಸಿಎಚ್‌ಇ ನಂತಹ ಕಿಣ್ವಗಳು ನಿಯಂತ್ರಿಸುತ್ತವೆ. ಎಸಿಎಚ್‌ಇಯಲ್ಲಿ ಅಕ್ಸಿಟಿಕ್‌ ಅಸಿಡ್‌ ಮತ್ತು ಕೊಲಿನ್‌ ಎಂಬ ಎರಡು ಭಾಗಗಳಿರುತ್ತವೆ. ಪ್ರಸ್ತುತ ಇರುವ ರೋಗ ಪರೀಕ್ಷಾ ವಿಧಾನಗಳಲ್ಲಿ ಕೋಲಿನ್‌ನ ಮಟ್ಟವನ್ನು ಅಳೆಯುವ ಮೂಲಕ ಎಸಿಎಚ್‌ಇ ಮಟ್ಟ ಲೆಕ್ಕ ಹಾಕಲಾಗುತ್ತದೆ. ಆದರೆ ಎಸಿಎಚ್‌ ಇಯಂತಹ ಗುಣ ಲಕ್ಷಣ ಹೊಂದಿರುವ ಇನ್ನೆರಡು ಸೋದರಿ ಕಿಣ್ವಗಳಿದ್ದು ನಿಖರ ಫ‌ಲಿತಾಂಶ ಸಿಗುವುದಿಲ್ಲ.

Advertisement

ಈ ಹಿನ್ನೆಲೆಯಲ್ಲಿ ಐಐಎಸ್‌ಸಿ ವಿಜ್ಞಾನಿಗಳು ಮೊದಲು ಎಸಿಎಚ್‌ಇ ಕಿಣ್ವ ಮತ್ತು ಅಕ್ಟೈಲ್‌ ಕೊಲಿನ್‌ನ ಸಂರಚನೆಯನ್ನು ಅಧ್ಯಯನ ನಡೆಸಿ, ಅಕ್ಟೈಲ್‌ಕೊಲಿನ್‌ನ್ನು ಕೃತಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಆ ಬಳಿಕ ಸಂಶೋಧನೆ ಮುಂದುವರಿಸಿ ಅಮೊನಿಯಂನ ಒಂದು ಭಾಗ ಎಸಿಎಚ್‌ಇ ಜತೆಗೆ ಹೆಚ್ಚು ಸ್ಪಂದಿಸುತ್ತದೆ ಎಂಬುದನ್ನು ಕಂಡುಕೊಳ್ಳುತ್ತಾರೆ. ಹಾಗೆಯೇ ಇನ್ನೊಂದು ಭಾಗ ಎಸಿಎಚ್‌ಇಯ ಸಕ್ರಿಯ ಭಾಗದಲ್ಲಿ ನೈಸರ್ಗಿಕವಾಗಿ ಸೇರಿಕೊಂಡು ಪ್ರತಿದೀಪಕ ಸಿಗ್ನಲ್‌ ನೀಡುತ್ತದೆ. ಕಿಣ್ವದ ಜೊತೆ ಸೇರಲು ಎರಡು ಅಮೋನಿಯದ ಎರಡು ಭಾಗಗಳಿಗೆ ಅಗತ್ಯವಾದ ಅಂತರವನ್ನು ಅಳೆಯುವ ಮೂಲಕ ಮರೆಗುಳಿಯ ಲಕ್ಷಣಗಳನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಎಸಿಎಚ್‌ಇ ಮತ್ತು ಮಾನವನ ಮೆದುಳಲ್ಲಿರುವ ಎಸಿಎಚ್‌ ಇಯನ್ನು ಬಳಸಿ ಈ ಪ್ರಯೋಗ ನಡೆಸಲಾಗಿದೆ. ಬ್ಯಾಕ್ಟೀರಿಯಾ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಸಕ್ರಿಯ ಎಸಿಎಚ್‌ಇಯನ್ನು ಕ್ಲೋನಿಂಗ್‌ ಮಾಡಿ ಪ್ರಯೋಗ ನಡೆಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಡಿಮೆ ವೆಚ್ಚದ, ವಿಶ್ವಾಸಾರ್ಹ ಪರಿಹಾರ ನಮ್ಮ ಗುರಿ “ನಮಗೆ ಪ್ರಯೋಗದ ಪರಿಕಲ್ಪನೆ ಮತ್ತು ಮುಂದಿನ ಪ್ರಯೋಗದ ಮುಂದಿನ ಹೆಜ್ಜೆ ಏನಿರಬೇಕು ಎಂಬ ಯೋಚನೆ ಬಂದಿದೆ. ಇನ್ನಷ್ಟು ಪ್ರಯೋಗ ನಡೆಸುವ ಅವಶ್ಯಕತೆಯಿದೆ. ನಾವು ಈಗ ಆಲ್ಟ್ರಾ ವಯಲೆಟ್‌ (ಯುವಿ) ಸಕ್ರಿಯ ಮಾದರಿಯಲ್ಲಿ ಪ್ರಯೋಗ ಮಾಡಿದ್ದೇವೆ. ಈ ಮಾದರಿಯಲ್ಲಿ ಹೆಚ್ಚಿನ ಡೋಸ್‌ ನೀಡಿದರೆ
ಅಂಗಾಂಶಗಳಿಗೆ ಹಾನಿ ಆಗಬಹುದು. ಆದ್ದರಿಂದ ಇನ್‌ಫ್ರಾರೆಡ್‌ ಮಾಡೆಲ್‌ಗೆ ನಮ್ಮ ಪ್ರಯೋಗವನ್ನು ಬದಲಾಯಿಸಬೇಕು. ಇನ್‌ಫ್ರಾರೆಡ್‌ ಮಾಡೆಲ್‌ನಿಂದ ಅಂಗಾಂಶಗಳಿಗೆ ಹಾನಿ ಆಗಲಾರದು. ನಾವು ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ. ಕಡಿಮೆ ವೆಚ್ಚದ, ನಂಬಿಗಸ್ತ ಪರಿಹಾರ ಕಂಡುಹಿಡಿಯುವುದು ನಮ್ಮ ಗುರಿ ಎನ್ನುತ್ತಾರೆ ಐಐಎಸ್‌ಸಿ ವಿಜ್ಞಾನಿ ದೇಬಾಶಿಸ್‌ ದಾಸ್‌.

*ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next