ಎಚ್.ಡಿ.ಕೋಟೆ: ಹೈದರಾಬಾದ್‌ನಿಂದ ಕ್ಯಾಟಲ್ ಕಂಟೈನರ್ ವಾಹನದಲ್ಲಿ ಕೇರಳ ರಾಜ್ಯಕ್ಕೆ ಸಾಗಣೆ ಮಾಡುತ್ತಿದ್ದ 30 ಎಮ್ಮೆಗಳ ವಾಹನ ವಶಕ್ಕೆ ತೆಗೆದುಕೊಂಡ ಎಚ್.ಡಿ.ಕೋಟೆ ಪೊಲೀಸರು ಮಾಹಿತಿ ಬಯಿಸಿದಾಗ ಎಮ್ಮೆಗಳ ಸಾಗಣೆಗೆ ಅನುಮತಿ ಪಡೆಯಲಾಗಿದೆ ಅನ್ನುವ ಮಾಹಿತಿ ಮೇಲ್ನೋಟಕ್ಕೆ ತಿಳಿದು ಬಂದಿದೆ.
ಒಂದು ಕ್ಯಾಟಲ್ ಕಂಟೈನರ್ ವಾಹನದಲ್ಲಿ 30 ಎಮ್ಮೆಗಳನ್ನು ಸಾಗಣೆ ಮಾಡುತ್ತಿದ್ದ ಎಮ್ಮೆಗಳಿಗೆ ನೀರು ಆಹಾರ ಇಲ್ಲದೆ ಸುಮಾರು 3-4 ದಿನಗಳ ಹಿಂದಿನಿಂದ ಮಿತಿಮೀರಿದ ಪ್ರಮಾಣದಲ್ಲಿ ಸಾಗಣೆ ಮಾಡುತ್ತಿರುವುದನ್ನು ಗಮನಿಸಿದಾಗ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕೇರಳ ರಾಜ್ಯದಲ್ಲಿ ಕಸಾಯಿಖಾನೆಗೆ ಸಾಗಣೆ ಆಗುತ್ತಿರಬಹುದೆಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದಾರೆ.
ಸಾರ್ವಜನಿಕರ ಅನುಮಾನಕ್ಕೆ ಪೂರಕವಾಗಿ ವಾಹನದಲ್ಲಿದ್ದ ಬೆರಳೆಣಿಕೆಯಷ್ಟು ಎಮ್ಮೆಗಳಿಗೆ ಮಾತ್ರ ಓಲೆ ಅಳವಡಿಸಲಾಗಿದ್ದು, ಇನ್ನುಳಿದ ಎಮ್ಮೆಗಳಿಗೆ ಶನಿವಾರ ರಾತ್ರಿ ಕತ್ತಲಿನಲ್ಲೇ ಎಚ್ .ಡಿ.ಕೋಟೆ ಪಶುವೈದ್ಯರ ತಂಡ ಓಲೆ ಹಾಕುತ್ತಿದ್ದದ್ದು ಸಾರ್ವಜನಿಕರ ಅನುಮಾನಕ್ಕೆ ಪೂರಕವಾಗಿರುವುದು ಮೇಲ್ನೋಟಕ್ಕೆ ಸಾಬೀತಾದಂತಿದೆ.
ಘಟನೆ ವಿವರ: ಕ್ಯಾಟಲ್ ಕಂಟೈನರ್ ವಾಹನದಲ್ಲಿ ಖಚಿತ ಮಾಹಿತಿ ಮೇರೆಗೆ ಎಚ್.ಡಿ.ಕೋಟೆ ಸರ್ಕಲ್‌ಇನ್ಸ್‌ಪೆಕ್ಟರ್ ಬಸವರಾಜು ಮತ್ತು ತಂಡ ಶುಕ್ರವಾರ ತಡರಾತ್ರಿಯಿಂದ ಕಾವಲು ಕಾದು ಶನಿವಾರ ಮುಂಜಾನೆ ವೇಳೆಯಲ್ಲಿ ಹ್ಯಾಂಡ್ ಪೋಸ್ಟ್‌ನಲ್ಲಿ ಎಮ್ಮೆ ಸಾಗಿಸುತ್ತಿದ್ದ ವಾಹನದ ಸಮೇತ ಎಮ್ಮೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆ ಸಾಗಿಸುತ್ತಿದ್ದ ಪರವಾನಗಿ ಮತ್ತು ರಾಸುಗಳ ತಪಾಸಣೆಗೆ ಸಕಾಲದಲ್ಲಿ ಪಶುವೈದ್ಯರು ಲಭ್ಯವಾಗದ ಹಿನ್ನೆಲೆಯಲ್ಲಿ ಅಧಿಕೃತ ವರದಿ ಲಭ್ಯವಾಗುವುದು ತಡವಾಗಿದೆ. ಅಷ್ಟರಲ್ಲಾಗಲೇ ಸಂಜೆಯಾಗುತ್ತಿದ್ದಂತೆಯೇ ಸಾರ್ವಜನಿಕರು ಮತ್ತು ಮಾಧ್ಯಮದವರಿಗೆ ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ವಿಚಾರ ಮುಟ್ಟಿಸಿದಾಗ ಪರಿಸ್ಥಿತಿ ಬಿಗಡಾಯಿಸಿಕೊಂಡು ರಾತ್ರಿಯಾಗುತ್ತಿದ್ದಂತೆಯೇ ರಾಸುಗಳಿದ್ದ ವಾಹನವನ್ನು ಕಾಲೇಜು ಆವರಣಕ್ಕೆ ಸ್ಥಳಾಂತರಿಸಿ 30 ಎಮ್ಮೆಗಳನ್ನು ವಾಹನದಿಂದ ಕೆಳಗಿಳಿಸಿ ಓಲೆ ಹಾಕುವ ಕಾರ್ಯ ಕತ್ತಲಿನಲ್ಲೇಯೇ ನಡೆಯಿತು.
ಒಟ್ಟಾರೆ 30 ಎಮ್ಮೆಗಳನ್ನು ಒಂದೇ ವಾಹನದಲ್ಲಿ ಅಮಾನವೀಯವಾಗಿ ಸಾಗಿಸಲು ಅನುಮತಿ ಇದೆಯೇ, ನಿಂತ ಸ್ಥಿತಿಯಲ್ಲೇ ಒಂದು ಎಮ್ಮೆಗೆ ಮತ್ತೂಂದು ಎಮ್ಮೆ ತಿವಿದು ಉಸಿರು ಕಟ್ಟುವ ಸ್ಥಿತಿಯಲ್ಲಿದ್ದರಿಂದ ಬಹು ಎಮ್ಮೆಗಳ ಮೈ ಗಾಯಗಳಾಗಿತ್ತು. ಒಟ್ಟಾರೆ ಇದೊಂದು ಅಮಾನವೀಯ ಘನಟೆಯಾಗಿದ್ದು, ಎಮ್ಮೆಗಳಿಗೆ ಓಲೆ ಹಾಕದೇ ಇರುವುದು, ಸ್ಥಳಾಂತರಕ್ಕೆ ಅನುಮತಿ ಪತ್ರ ನೀಡದೇ ಇಲ್ಲದೇ ಇರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಉಳ್ಳವರ ಪರವಾಗಿ ಪರೋಕ್ಷವಾಗಿ ಕಾನೂನು ಕೆಲಸ ಮಾಡಿರಬೇಕು ಅನ್ನುವ ಶಂಕೆ ವ್ಯಕ್ತವಾಗುತ್ತಿದೆ.
ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ವಾಹನದ ಸಮೇತ ಎಮ್ಮೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪಶು ವೈದ್ಯರು ತಪಾಸಣೆ ನಡೆಸಿ ಎಮ್ಮೆಗಳ ಸಾಗಾಣಿಕೆಗೆ ಅನುಮತಿ ಇದೆಯೇ ಇಲ್ಲವೇ ಅನ್ನುವುದನ್ನು ಖಚಿತ ಪಡಿಸಿ ವರದಿ ನೀಡಿದ ನಂತರ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ.
-ಬಸವರಾಜು, ಸರ್ಕಲ್‌ಇನ್ಸ್‌ಪೆಕ್ಟರ್
ಎಮ್ಮೆಗಳನ್ನು ಹೈದರಾಬಾದ್‌ನಿಂದ ಈ ರೀತಿ ಅಮಾನವೀಯ ವಾಗಿ ಸಾಗಣೆ ಮಾಡುವುದು ಸರಿಯಲ್ಲ. ಮಿತಿಮೀರಿದ ಪ್ರಮಾಣದಲ್ಲಿ ಆಹಾರ ನೀರು ನೀಡದೆ ನಿಂತ ಸ್ಥಿತಿಯಲ್ಲೇ ಕೇರಳ ರಾಜ್ಯಕ್ಕೆ ಇಕ್ಕಟ್ಟಾದ ವಾಹನದಲ್ಲಿ ಸಾಗಣೆ ಮಾಡುವುದು ಅಮಾನವೀಯ. ಮೇಲ್ನೋಟಕ್ಕೆ ಇದೊಂದು ಜಾಲ ಕೇರಳ ಕಸಾಯ ಖಾನೆಗೆ ಸಾಗಣೆ ಮಾಡುತ್ತಿರಬಹುದೆಂದ ಅನುಮಾನ ಕಾಡುತ್ತಿದೆ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿಗೆ ಮಣಿದು ಅಧಿಕಾರಿಗಳು ಪರೋಕ್ಷವಾಗಿ ಸಹಕಾರ ನೀಡುತ್ತಿರಬೇಕೆಂಬ ಸಂಶಯ ಕಾಡುತ್ತಿದೆ.
-ಮಹೇಶ್, ರೈತ