ಕುಂದಾಪುರ: ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದ ಉಡುಪಿ ಜಿಲ್ಲೆಯ ಸುಮಾರು 80 ಮಂದಿ ಹಿರಿಯ ನಾಗರಿಕರಿದ್ದ ತಂಡವು ರೈಲುಗಳ ಸಂಚಾರ ವ್ಯತ್ಯಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ವಿಷಯ ತಿಳಿದ ಕೂಡಲೇ ಸ್ಪಂದಿಸಿದ ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪರ್ಯಾಯ ವ್ಯವಸ್ಥೆ ಮೂಲಕ ನೆರವಾಗಿದ್ದಾರೆ.
ಉತ್ತರ ಭಾರತ ಪ್ರವಾಸ ಮುಗಿಸಿ ಮುಂಬಯಿಗೆ ಬಂದು ಮತ್ಸ್ಯಗಂಧ ರೈಲಿನಲ್ಲಿ ಊರಿಗೆ ಬರಬೇಕಿದ್ದ ಉಡುಪಿ ಜಿಲ್ಲೆಯ ಈ ತಂಡವು ರಾಂಚಿ – ಮುಂಬಯಿ ಎಕ್ಸ್‌ಪ್ರೆಸ್ ರೈಲು 10 ಗಂಟೆ ವಿಳಂಬದಿಂದಾಗಿ ಮಾರ್ಗ ಮಧ್ಯೆ ಸಿಲುಕಿದ್ದರು. ಈ ತಂಡ ಮುಂಬಯಿ ತಲುಪುವ ಮೊದಲೇ ಮತ್ಸ್ಯಗಂಧ ರೈಲು ಹೊರಟಾಗಿತ್ತು. ಆದ್ದರಿಂದ ತಂಡವು ಸಂಸದರನ್ನು ಸಂಪರ್ಕಿಸಿತು. ಕೂಡಲೇ ಸಂಸದರು ರೈಲ್ವೇ ಸಚಿವಾಲಯದ ಜತೆ ಮಾತನಾಡಿ, ಮಂಗಳೂರಿಗೆ ಬರಬೇಕಾದ ಸಿಎಸ್‌ಟಿ- ಮಂಗಳೂರು ರೈಲಿಗೆ ವಿಶೇಷ ಬೋಗಿಯ ವ್ಯವಸ್ಥೆ ಮಾಡಿದರು.
ರೈಲು ಮಂಡಳಿಯಿಂದ ಈ ಬಗ್ಗೆ ಸೆಂಟ್ರಲ್ ರೈಲ್ವೆಗೆ ಆದೇಶ ಬಂದ ಕೂಡಲೇ ಹೆಚ್ಚುವರಿ ಬೋಗಿ ಅಳವಡಿಕೆ ನಡೆದಿದ್ದು, ಸಮಸ್ಯೆಗೆ ಸಿಲುಕಿದ್ದ ತಂಡವು ಈ ರೈಲಿನ ವಿಶೇಷ ಬೋಗಿಯಲ್ಲಿ ಊರಿಗೆ ಪ್ರಯಾಣ ಬೆಳೆಸಿದರು. ಇದಕ್ಕೆ ಸಹಕರಿಸಿದ ರೈಲ್ವೇ ಖಾತೆ ರಾಜ್ಯ ಸಚಿವ ಸೋಮಣ್ಣ ಹಾಗೂ ಅವರ ಕಚೇರಿಯ ಸಿಬಂದಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ನಾನು ಜಿಲ್ಲೆಯ ವಿವಿಧೆಡೆಗಳಿಂದ 50 ಕ್ಕೂ ಹೆಚ್ಚು ಮಂದಿಯನ್ನು ಕಾಶಿ, ಅಯೋಧ್ಯೆಯಂತಹ ತೀರ್ಥ ಕ್ಷೇತ್ರಗಳಿಗೆ ಕರೆದೊಯ್ದಿದ್ದೆ. ಹಿಂದಿರುಗುವಾಗ ಮತ್ಸ್ಯಗಂಧ ರೈಲು ತಪ್ಪಿದ್ದರಿಂದ ಕಂಗೆಟ್ಟು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಸಹಾಯ ಕೋರಿದ್ದು, ಅವರು ಕೂಡಲೇ ಸ್ಪಂದಿಸಿ ಸೂಕ್ತ ವ್ಯವಸ್ಥೆ ಮಾಡಿದರು ಎಂದು ತಂಡದ ನೇತೃತ್ವ ವಹಿಸಿದ್ದ ಸಾಲಿಗ್ರಾಮದ ಚೇಂಪಿ ಪ್ರಕಾಶ್ ಭಟ್ ತಿಳಿಸಿದ್ದಾರೆ.
“ನಮ್ಮ ಭಾಗದಿಂದ ಅಯೋಧ್ಯೆ, ಕಾಶಿ ಕಡೆಗೆ ತೆರಳಿದ್ದ ಯಾತ್ರಾರ್ಥಿಗಳು ಹಿಂದಿರುಗುವಾಗ ಮತ್ಸ್ಯಗಂಧ ರೈಲು ತಪ್ಪಿ ಹೋದುದು ನನ್ನ ಗಮನಕ್ಕೆ ಬಂದಿತ್ತು. ಕೂಡಲೇ ರೈಲ್ವೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡೆ. ತ್ವರಿತಗತಿಯಲ್ಲಿ ಅವರು ಸಹ ಸ್ಪಂದಿಸಿದ್ದು, ಬೇರೊಂದು ರೈಲಿಗೆ ವಿಶೇಷ ಬೋಗಿ ಅಳವಡಿಸಿ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವ ಸೋಮಣ್ಣ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆಗಳು.”
– ಕೋಟ ಶ್ರೀನಿವಾಸ ಪೂಜಾರಿ, ಸಂಸದ