Advertisement

ಬಸ್‌ ದಿನಾಚರಣೆಗೆ ಮರುಚಾಲನೆ

10:20 AM Nov 08, 2019 | Team Udayavani |

ಬೆಂಗಳೂರು: ಈ ಹಿಂದಿನ ಸರ್ಕಾರದಲ್ಲಿ ಸ್ಥಗಿತಗೊಂಡಿದ್ದ “ಬಸ್‌ ದಿನ’ ಆಚರಣೆಗೆ ಬಿಜೆಪಿ ಸರ್ಕಾರ ಮರುಚಾಲನೆ ನೀಡಲು ನಿರ್ಧರಿಸಿದ್ದು, ಶೀಘ್ರದಲ್ಲೇ ಪ್ರತಿ ತಿಂಗಳ ಮೊದಲ ವಾರದಲ್ಲಿ ಇದನ್ನು ನಿಯಮಿತವಾಗಿ ಆಚರಿಸಲು ಬಿಎಂಟಿಸಿಯಲ್ಲಿ ಸಿದ್ಧತೆ ನಡೆದಿದೆ.

Advertisement

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ತಿಂಗಳು 4ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಿಂದ ಬಸ್‌ ದಿನ ಆಚರಿಸಲಾಗುತ್ತಿತ್ತು. ಆ ಮೂಲಕ ಸಮೂಹ ಸಾರಿಗೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು. ಕೆಲವು ದಿನಗಳಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. ಈಗ ಮರುಚಾಲನೆ ನೀಡಲಾಗುವುದು ಎಂದು ಸಂಸ್ಥೆಯ ನೂತನ ಅಧ್ಯಕ್ಷ ಎನ್‌.ಎಸ್‌. ನಂದೀಶ್‌ ರೆಡ್ಡಿ ತಿಳಿಸಿದರು.

ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಿದ್ದು, ಖಾಸಗಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸೇವೆಯನ್ನು ಉತ್ತಮಗೊಳಿಸುವ ಮೂಲಕ ಸಂಸ್ಥೆಯನ್ನು “ಜನ ಸ್ನೇಹಿ’ಯಾಗಿ ಪರಿವರ್ತನೆ ಮಾಡುವುದು ನಮ್ಮ ಮುಂದಿರುವ ಸವಾಲು.

ಈ ನಿಟ್ಟಿನಲ್ಲಿ ಹಂತ-ಹಂತವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು. ಆದಾಯ ಸೋರಿಕೆ ಎಲ್ಲಿ ಆಗುತ್ತಿದೆ? ನಷ್ಟದ ಮೂಲ ಯಾವುದು? ಅದನ್ನು ಸರಿಪಡಿಸುವುದು ಹೇಗೆ? ಅದಕ್ಕೆ ಪೂರಕವಾಗಿ ಪ್ರಯೋಗಾತ್ಮಕ ಚಟುವಟಿಕೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್‌ ರೆಡ್ಡಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next