Advertisement

ಆನ್‌ಲೈನ್‌ನಲ್ಲೇ ಅಗತ್ಯ ವಸ್ತು ಪೂರೈಕೆದಾರರ ಮಾಹಿತಿ

11:09 AM Mar 31, 2020 | Suhan S |

ಹುಬ್ಬಳ್ಳಿ: ತರಕಾರಿ, ಹಣ್ಣು, ದಿನಸಿ ವಸ್ತುಗಳ ಪೂರೈಕೆ ವ್ಯವಸ್ಥೆ ಮತ್ತಷ್ಟು ಸರಳೀಕರಣಗೊಳಿಸಿದ್ದು, ಕುಳಿತಲ್ಲೇ ತಮ್ಮ ವ್ಯಾಪ್ತಿಯ ವ್ಯಾಪಾರಿಗಳ ಮಾಹಿತಿ ಹಾಗೂ ಅವರ ಮೊಬೈಲ್‌ ಸಂಖ್ಯೆಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.

Advertisement

ಇನ್ನು ಹೋಟೆಲ್‌ಗ‌ಳಿಂದ ಉಪಹಾರ-ಊಟ ಪಾರ್ಸಲ್‌ ಪೂರೈಕೆಗೂ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಹಾಗೂ ಪಾಲಿಕೆಯಿಂದ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆ ರದ್ದುಗೊಳಿಸಿದ ನಂತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಆರಂಭವಾಗಿದೆ. ಪ್ರತಿಯೊಂದು ಪ್ರದೇಶಕ್ಕೂ ತರಕಾರಿ ಹಾಗೂ ಹಣ್ಣು ತಲುಪಿಸಲು 930 ವ್ಯಾಪಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ ಕೆಲವೆಡೆ ತಮಗೆ ತರಕಾರಿ ದೊರೆಯುತ್ತಿಲ್ಲ ಎನ್ನುವ ದೂರು ಬಂದಿರುವ ಹಿನ್ನೆಲೆಯಲ್ಲಿ ಇದಕ್ಕೂ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

ವೆಬ್‌ಸೈಟ್‌-ಸಹಾಯ ವಾಣಿ: ಕೆಲವೆಡೆ ತರಕಾರಿ ವ್ಯಾಪಾರಿಗಳು ಸುತ್ತಾಡದೆ ಒಂದೆಡೆ ನಿಂತು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಆಯಾ ವಾರ್ಡಿನಲ್ಲಿ ಎಷ್ಟು ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳಿದ್ದಾರೆ, ಅವರ ಮೊಬೈಲ್‌ ಸಂಖ್ಯೆ ಸಮೇತ ಮಾಹಿತಿಯನ್ನು  www.hdmc.nrc.co.in ವೆಬ್‌ಸೈಟಿಗೆ ಅಪ್‌ಲೋಡ್‌ ಮಾಡಲಾಗುತ್ತಿದೆ. ಜನರು ಈ ವೆಬ್‌ಸೈಟ್‌ ನಲ್ಲಿ ವಾರ್ಡ್‌ ಸಂಖ್ಯೆ ಆಯ್ಕೆ ಮಾಡಿಕೊಂಡರೆ ಅಲ್ಲಿ ತರಕಾರಿ, ಹಣ್ಣಿನ ವ್ಯಾಪಾರಿಗಳ ಹೆಸರು-ಮೊಬೈಲ್‌ ಸಂಖ್ಯೆ ಇರುತ್ತದೆ. ಅವರಿಗೆ ಕರೆ ಮಾಡಿ ತಮ್ಮ ಮನೆಯತ್ತ ಬರುವ ಅಥವಾ ಅಲ್ಲಿಗೆ ಹೋಗಿ ತರಕಾರಿ, ಹಣ್ಣು ಖರೀದಿ ಮಾಡಬಹುದಾಗಿದೆ. ಒಂದು ವೇಳೆ ಈ ಕುರಿತು ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯದವರು ಪಾಲಿಕೆ ಕಂಟ್ರೋಲ್‌ ರೂಂ-8277803778 ಅಥವಾ ಸಹಾಯ ವಾಣಿ-1077ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಈ ಸೌಲಭ್ಯ ಮಂಗಳವಾರದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.

ಆಹಾರ ಧಾನ್ಯವೂ ಮನೆ ಮನೆಗೆ: ತರಕಾರಿ ಹಾಗೂ ಹಣ್ಣು ಮನೆಗೆ ತಲುಪಿಸುವಲ್ಲಿ ವ್ಯವಸ್ಥಿತ ಯೋಜನೆ ಸಾಕಾರಗೊಂಡ ಹಿನ್ನೆಲೆಯಲ್ಲಿ ದವಸ ಧಾನ್ಯ ಹಾಗೂ ಔಷಧಿ ಮನೆ ಬಾಗಿಲಿಗೆ ತಲುಪಿಸುವ ಕುರಿತು ಕಸರತ್ತು ನಡೆಸಲಾಗಿದೆ. ಈಗಾಗಲೇ ದವಸ ಧಾನ್ಯ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ 245 ವ್ಯಾಪಾರಿಗಳಿಗೆ ಪಾಸ್‌ ನೀಡಲಾಗಿದೆ. ಜನರು ಕರೆ ಮಾಡಿ ಬೇಡಿಕೆ ಸಲ್ಲಿಸಿದರೆ ಅವುಗಳನ್ನು ಪೂರೈಸಲಿದ್ದಾರೆ. ಇನ್ನಷ್ಟು ವ್ಯಾಪಾರಿಗಳನ್ನು ಈ ಯೋಜನೆಗೆ ಸೇರಿಸಲು ಪ್ರಯತ್ನಗಳು ನಡೆದಿವೆ. ಇದು ಕೂಡ ಯಶಸ್ವಿಯಾದರೆ ಜನತೆ ಮನೆಯಿಂದ ಹೊರಗೆ ಬರುವುದಕ್ಕೆ ಬಹುತೇಕ ಕಡಿವಾಣ ಬೀಳಲಿದೆ. ಅಗತ್ಯ ವಸ್ತುಗಳ ಪೈಕಿ ಔಷಧಿ ಹಾಗೂ ಮಾತ್ರೆಯನ್ನು ಕೂಡ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮೆಡಿಕಲ್‌ ಶಾಪ್‌ ಗಳ ಮಾಲೀಕರೊಂದಿಗೆ ಚರ್ಚಿಸಲಾಗಿದ್ದು, ಜನರಿಗೆ ಸೇವೆ ನೀಡಲು ಒಪ್ಪಿಗೆ ನೀಡಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆಯೋ ಗೊತ್ತಿಲ್ಲ. ಆದರೆ ತಮ್ಮ ಹತ್ತಿರದ ಮೆಡಿಕಲ್‌ ಶಾಪ್‌ನಲ್ಲಿ ತಮಗೆ ಬೇಕಾದ ಔಷಧಿ, ಮಾತ್ರೆ ದೊರೆಯುತ್ತದೆಯೋ ಎನ್ನುವ ಕುರಿತು ಮಾಹಿತಿ ಪಡೆದು ಹೊರಬಹುದಾಗಿದೆ ಎನ್ನುವ ಲೆಕ್ಕಚಾರ ಅಧಿಕಾರಿಗಳಲ್ಲಿದೆ. ತರಕಾರಿ, ಹಣ್ಣು, ಔಷಧಿ, ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯಾಪಾರಿಗಳ ಪೂರ್ಣ ಮಾಹಿತಿ ಪಾಲಿಕೆ ವೈಬ್‌ಸೈಟ್‌ನಲ್ಲಿ ದೊರೆಯಲಿವೆ.

ವೈರಸ್‌ ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಜನರು ಹೊರಗೆ ಬರಬಾರದು. ಅಗತ್ಯ ವಸ್ತುಗಳ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಹಲವು ವ್ಯವಸ್ಥೆಗಳನ್ನು ಜಾರಿ ಮಾಡಲಾಗುತ್ತಿದೆ. ತರಕಾರಿ-ಹಣ್ಣು ತರಕಾರಿ ಮನೆ ಬಾಗಿಲಿನಲ್ಲಿ ದೊರೆಯುತ್ತಿವೆ. ಔಷಧಿ, ದಿನಸಿ ವಸ್ತುಗಳು ಮನೆ ಬಾಗಿಲಿಗೆ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ. ಆದಷ್ಟು ಶೀಘ್ರದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. -ಡಾ| ಸುರೇಶ ಇಟ್ನಾಳ, ಆಯುಕ್ತ, ಮಹಾನಗರ ಪಾಲಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next