Advertisement

ವೀರಯೋಧರ ಕುಟುಂಬಕ್ಕೆ ಶಾಶ್ವತ ಪರಿಹಾರ ನೀತಿಗೆ ಆಗ್ರಹ

07:40 AM Feb 19, 2019 | Team Udayavani |

ಮಂಡ್ಯ: ಗಡಿ ಕಾಯುವ ಯಾವುದೇ ಯೋಧರು ವೀರಮರಣವನ್ನಪ್ಪಿದರೂ ಅವರ ಕುಟುಂಬಕ್ಕೆ  ಒಂದು ಕೋಟಿ ರೂ. ಪರಿಹಾರ ನೀಡುವ ಶಾಶ್ವತ ಪರಿಹಾರ ನೀತಿಯನ್ನು ರಾಜ್ಯಸರ್ಕಾರ ರೂಪಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್‌.ಸಂದೇಶ್‌ ಒತ್ತಾಯಿಸಿದರು.

Advertisement

ನಗರದ ವಿಶ್ವೇಶ್ವರಯ್ಯ ರಸ್ತೆಯ ರಾಮೇಗೌಡ ಸಂಕೀರ್ಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಾಮಫ‌ಲಕ ಕಲಾವಿದರ ಸಂಘ ಜಮ್ಮು-ಕಾಶ್ಮೀರದ ಪುಲ್ವಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಯೋಧರಿಗೆ ದೀಪ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಯೋಧರು ಸಾವಿಗೀಡಾದ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಹಿತೈಷಿಗಳು ಸರ್ಕಾರವನ್ನು ಒತ್ತಾಯಿಸುವುದು ಸೂಕ್ತವಲ್ಲ. ಸೈನಿಕರಿಗೆ ನೈತಿಕ ಶಕ್ತಿ ತುಂಬುವ ಕಾರ್ಯಕ್ರಮಗಳು ಕೇಂದ್ರ ಮತ್ತು ರಾಜ್ಯಸರ್ಕಾರದ ಮಟ್ಟದಲ್ಲಿ ನಡೆಯಬೇಕು ಎಂದ ಅವರು, ಮಂಡ್ಯ ಜಿಲ್ಲೆಯ ಯೋಧ ಗುರು ಕುಟುಂಬಕ್ಕೆ 1 ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದರು.

ನಾಮಫ‌ಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಗುರುರಾಜ್‌ ಮಾತನಾಡಿ, ಗುಪ್ತದಳದ ವೈಫ‌ಲ್ಯದಿಂದಾಗಿ ಭಾರತೀಯ ಯೋಧರು ದುರಂತ ಸಾವಿಗೀಡಾಗಿದ್ದಾರೆ. ನಾವೆಲ್ಲರೂ ಯೋಧರಾಗಲು ಸಾಧ್ಯವಾಗದೇ ಇರುವುದರಿಂದ ಯೋಧರಿಗೆ ಗೌರವ ಕೊಡುವ ಹಾಗೂ ದೇಶ ಕಾಯುವ ಅವರ ಕುಟುಂಬಗಳನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಚಿಂತಕ ಲಿಂಗಣ್ಣ ಬಂಧೂಕಾರ್‌ ಮಾತನಾಡಿ, ದೇಶಾಭಿಮಾನ ಮತ್ತು ಸ್ವಾಭಿಮಾನ ಹೊಂದಿರುವವರು ಮಾತ್ರ ದೇಶ ಕಾಯುವಂತಹ ಮಹಾನ್‌ ಸಾಹಸಕ್ಕೆ ಮುಂದಾಗುತ್ತಾರೆ. ಅವರಲ್ಲಿರುವ ದೇಶಪ್ರೇಮವನ್ನು ಇಂದಿನ ಯುವಜನರಲ್ಲಿ ತುಂಬಬೇಕು. ಪ್ರತಿಯೊಬ್ಬರಲ್ಲೂ ದೇಶಪ್ರೇಮವನ್ನು ಮೂಡಿಸಿ ದೇಶ ರಕ್ಷಣೆ ಮಾಡುವಂತೆ ಕರೆ ನೀಡಿದರು.

Advertisement

ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್‌.ಡಿ.ಜಯರಾಂ ಮಾತನಾಡಿ, ಉಗ್ರರ ದಾಳಿ ಖಂಡನೀಯ. ಬಿಗಿ ಭದ್ರತೆ ಇದ್ದರೂ ಇಂತಹದೊಂದು ಘಟನೆ ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ದೀಪ ನಮನ ಕಾರ್ಯಕ್ರಮದಲ್ಲಿ ಕಲಾವಿದ ಪ್ರಕಾಶ್‌, ಎಲ್ಲಾ ಹುತಾತ್ಮ ವೀರಯೋಧರ ಭಾವಚಿತ್ರಗಳನ್ನು ಸಂಗ್ರಹಿಸಿ ಅನಾವರಣಗೊಳಿಸುವುದರ ಜೊತೆಗೆ ಪ್ರತಿಯೊಬ್ಬ ಹುತಾತ್ಮ ಯೋಧನ ಎದುರು ದೀಪವಿಟ್ಟು ಬೆಳಗಿಸಿದರಲ್ಲದೆ, ಕೃತಕ ಸಮಾಧಿ ನಿರ್ಮಿಸಿ ಅದರ ಮೇಲೆ ಪುಷ್ಪವಿಟ್ಟು ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

ಸಂಘದ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಸಂತು, ಯೋಗೇಶ್‌, ಚೇತನ್‌, ವಿನಯ್‌, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಿಂಗಣ್ಣ, ಇಂಪ್ಯಾಕ್ಟ್ ಅಕಾಡೆಮಿಯ ಎನ್‌.ಸಂತೋಷ್‌, ಸಿ.ಸಿದ್ಧಶೆಟ್ಟಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next