Advertisement

ಟ್ಯಾಕ್ಸಿಗಳ ಮೇಲಿನ ಜಿಎಸ್‌ಟಿ ಹೊರೆ ಇಳಿಸಲು ಮನವಿ

11:49 AM Sep 19, 2017 | Team Udayavani |

ಬೆಂಗಳೂರು: “ಇ-ಕಾಮರ್ಸ್‌’ ಸಂಸ್ಥೆಗಳ ಟ್ಯಾಕ್ಸಿಗಳಿಗೆ ಕೇವಲ ಒಂದೇ ತೆರಿಗೆ ಹಾಗೂ ದೇಶೀಯ ಟ್ಯಾಕ್ಸಿ ನಿರ್ವಹಣೆದಾರರಿಗೆ ಜಿಎಸ್‌ಟಿ ಅಡಿ ಎರಡು ಬಾರಿ ತೆರಿಗೆ ವಿಧಿಸುತ್ತಿರುವುದರಿಂದ ಹೊರೆಯಾಗುತ್ತಿದ್ದು, ಕೂಡಲೇ ಲೋಪ ಸರಿಪಡಿಸಬೇಕು ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಕೇಂದ್ರ ಸಚಿವರಿಗೆ ಮನವಿ ಮಾಡಿದೆ.

Advertisement

ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ನೇತೃತ್ವದಲ್ಲಿ ದಕ್ಷಿಣ ಭಾರತ ಟ್ಯಾಕ್ಸಿ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಖೀಲ ಭಾರತ ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ನ ಸಹಯೋಗದಲ್ಲಿ ನಿಯೋಗವೊಂದು ದೆಹಲಿಯಲ್ಲಿ ಸೋಮವಾರ ಕೇಂದ್ರ ಸಚಿವ ಅನಂತ ಕುಮಾರ್‌ ಹಾಗೂ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

ದೇಶದಲ್ಲಿ ಟ್ಯಾಕ್ಸಿ ವ್ಯವಹಾರದ ಮೇಲೆ ಜಿಎಸ್‌ಟಿಯಡಿ ವಿಧಿಸುತ್ತಿರುವ ತೆರಿಗೆ ಬಗ್ಗೆ ಸಾಕಷ್ಟು ಗೊಂದಲವಿದೆ. ಅಸಂಘಟಿತವಾದ ಟ್ಯಾಕ್ಸಿ ವಲಯದ ಮೇಲೆ ತೆರಿಗೆ ಮೇಲೆ ತೆರಿಗೆ ವಿಧಿಸುತ್ತಿರುವುದರಿಂದ ಹೊರೆಯಾಗುತ್ತಿರುವ ಬಗ್ಗೆ ಸಚಿವರಿಗೆ ಸಮಗ್ರ ಮಾಹಿತಿ ನೀಡಲಾಗಿದೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದರು.

ಇ- ಕಾಮರ್ಸ್‌ ಸಂಸ್ಥೆಗಳ ಟ್ಯಾಕ್ಸಿಗಳಿಗೆ ಒಂದೇ ತೆರಿಗೆ ವಿಧಿಸಲಾಗುತ್ತಿದೆ. ಆದರೆ ದೇಶೀಯ ಟ್ಯಾಕ್ಸಿ ನಿರ್ವಹಣಾ ಸಂಸ್ಥೆಗಳಿಗೆ ಎರಡು ಬಾರಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ತೀವ್ರ ಹೊರೆಯಾಗುತ್ತಿರುವ ಬಗ್ಗೆ ಸಚಿವರಿಗೆ ತಿಳಿಸಲಾಗಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು. ಉಡುಪಿ ಜಿಲ್ಲಾ ಟ್ಯಾಕ್ಸಿಮನ್‌ ಸಂಘದ ಅಧ್ಯಕ್ಷರಾದ ಮಾಜಿ ಶಾಸಕ ರಘುಪತಿ ಭಟ್‌ ಇತರರು ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next