ಹುಬ್ಬಳ್ಳಿ: ಕಾರ್ನಿಯಾ ಸಮಸ್ಯೆಯಿಂದ ಬಳಲುತ್ತಿ ರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನೇತ್ರದಾನ ಮಾಡುವವರ ಸಂಖ್ಯೆ ಅದಕ್ಕೆ ತಕ್ಕಂತೆ ಇಲ್ಲದಿರುವುದು ವಿಷಾದನೀಯ ಎಂದು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಜಂಟಿ ನಿರ್ದೇಶಕ ಡಾ| ಬಿ.ಡಿ. ಅಥಣಿ ಹೇಳಿದರು. ನೇತ್ರದಾನ ಜಾಗೃತಿಗೆ ಸಕ್ಷಮ, ಕಿಮ್ಸ್‌ನ ಆಶಾಕಿರಣ ಹಾಗೂ ಹುಬ್ಬಳ್ಳಿ ಪಶ್ಚಿಮ ರೋಟರಿ ಕ್ಲಬ್‌ನಿಂದ ಶನಿವಾರ ಇಲ್ಲಿನ ಕಿಮ್ಸ್ ಗೋಲ್ಡನ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ನಿಯಾ ಬದಲಿಸುವ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಬೇಕಿದೆ. ಸರಿಯಾದ ಸಂಪರ್ಕದ ಕೊರತೆಯಿಂದಲೂ ನೇತ್ರದಾನ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲ. ಕಿಮ್ಸ್‌ನವರು ನೇತ್ರದಾನ ಮಾಡುವವರಿಗಾಗಿ ಪ್ರತ್ಯೇಕವಾದ ದೂರವಾಣಿ ಸಂಖ್ಯೆ ಮೀಸಲಿಡಬೇಕು. ಯಾರಾದರೂ ನೇತ್ರದಾನ ಮಾಡುವುದಾಗಿ ಕರೆ ಮಾಡಿದರೆ ತಕ್ಷಣ ನುರಿತ ತಜ್ಞ ವೈದ್ಯರು ಸ್ಥಳಕ್ಕೆ ತೆರಳಿ ಅವರ ಕಣ್ಣು ಪಡೆದು ಅವಶ್ಯವುಳ್ಳವರಿಗೆ ಅಳವಡಿಸುವ ಕಾರ್ಯ ಮಾಡಬೇಕು ಎಂದರು.
ಪದ್ಮಶ್ರೀ ಪುರಸ್ಕೃತ ಡಾ| ಎಂ.ಎಂ. ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಅಂದಾಜು 30 ಲಕ್ಷ ಜನರು ಕಾರ್ನಿಯಾದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ನಮ್ಮ ಆಸ್ಪತ್ರೆಯಲ್ಲಿ 200 ಜನರು ನೇತ್ರದಾನ ಮಾಡುತ್ತಿದ್ದಾರೆ. ಇದುವರೆಗೆ 4 ಸಾವಿರ ಜನರ ಕಾರ್ನಿಯಲ್ ಬದಲಿಸಲಾಗಿದೆ ಎಂದರು. ಕಿಮ್ಸ್ ನಿರ್ದೇಶಕ ಡಾ| ಡಿ.ಡಿ. ಬಂಟ್, ಸಕ್ಷಮದ ಉಪಾಧ್ಯಕ್ಷ ಡಾ| ವಿ.ವಿ. ಮನಗೋಳಿ ಮಾತನಾಡಿದರು. ಕಿಮ್ಸ್ ಪ್ರಾಂಶುಪಾಲ ಡಾ| ಕೆ.ಎಫ್. ಕಮ್ಮಾರ, ನೇತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ| ಸವಿತಾ ಕನಕಪುರ, ವೈದ್ಯಕೀಯ ಅಧೀಕ್ಷಕ ಡಾ| ರಾಮಲಿಂಗಪ್ಪ ಅಂಟರಠಾನಿ, ನೇತ್ರ ಬ್ಯಾಂಕ್ ಅಧಿಕಾರಿ ಡಾ| ಶೋಭಾ ಗೌಡರ, ಹುಬ್ಬಳ್ಳಿ ಪಶ್ಚಿಮ ರೋಟರಿ ಕ್ಲಬ್ ಅಧ್ಯಕ್ಷ ಫಣಿರಾಜ ಎಚ್.ಕೆ., ಕಾರ್ಯದರ್ಶಿ ಜುಂಜಣ್ಣವರ ಎಂ.ಎಫ್., ಸಕ್ಷಮ ಉತ್ತರ ಪ್ರಾಂತ ಅಧ್ಯಕ್ಷ ಎಸ್.ಬಿ. ಶೆಟ್ಟಿ, ಕಿಮ್ಸ್‌ನ ಸಂಯೋಜನಾಧಿಕಾರಿ ಡಾ| ಮಹೇಶ ಕುಮಾರ ಎಸ್., ಇನ್ನರ್ ವೀಲ್ ಅಧ್ಯಕ್ಷೆ ಸ್ಮಿತಾ ಮಹೇಶ ಇದ್ದರು. ಸಕ್ಷಮ ಉತ್ತರ ಪ್ರಾಂತದ ಉಪಾಧ್ಯಕ್ಷ ಡಾ| ಸುನಿಲ ಗೋಖಲೆ ಸ್ವಾಗತಿಸಿದರು. ಸೌಮ್ಯ ಕಟ್ಟಿಮನಿ ಪ್ರತಿಜ್ಞಾವಿಧಿ ಬೋಧಿಸಿದರು.
ಶೇಖ್ ನಿಜಾಮುದ್ದೀನ್, ಸಂಪದಾ ಕಾನಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ವಿದ್ಯಾನಗರದ ಬಿವಿಬಿ ಕಾಲೇಜು ಆವರಣದಿಂದ ಕಿಮ್ಸ್ ವರೆಗೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ನಡಿಗೆ ನಡೆಯಿತು.