Advertisement

ರೈತರಿಗೆ ಪರಿಹಾರ ಕಲ್ಪಿಸಲು ಆಗ್ರಹ

12:36 PM Nov 06, 2019 | Suhan S |

ಬೆಳಗಾವಿ: ನೆರೆ ಹಾಗೂ ಅತಿವೃಷ್ಟಿಯಿಂದ ಬಡ ರೈತರು ಸರ್ಕಾರದ ಪರಿಹಾರ ಧನ ಸಿಗದೇ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ವತಿಯಿಂದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಬಡ ರೈತರು ಪ್ರವಾಹದಲ್ಲಿ ಮನೆ ಕಳೆದುಕೊಂಡು, ಬೆಳೆ ಹಾನಿಯಾಗಿ ಬೀದಿಗೆ ಬಿದ್ದಿದ್ದಾರೆ. ಇವರ ಸಂಕಷ್ಟಕ್ಕೆ ಸರ್ಕಾರ ಬರುತ್ತಿಲ್ಲ. ಬಡ ರೈತರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಇದು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ. ನಿರಂತರ ಅವಮಾನದಿಂದ ಬದುಕುತ್ತಿರುವ ರೈತನ ಗೋಳು ಕೇಳುವವರಾರು. ಕೃಷಿ ನಂಬಿ ಬದುಕುತ್ತಿರುವ ರೈತರ ಸ್ಥಿತಿ ಶೋಚನೀಯವಾಗಿದೆ ಎಂದು ಅಳಲು ತೋಡಿಕೊಂಡರು.

ರೈತ ಕುಟುಂಬಗಳು ಒತ್ತಡ ಮುಕ್ತ ಜೀವನ ನಡೆಸಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿಗೆ ವಿಸ್ತರಿಸಬೇಕು. ಸಾಮಾನ್ಯ ರೈತ ಹಾಗೂ ಭೂಮಿಹೀನ ರೈತರಿಗೆ ಅವರವರ ಭೂಮಿಯಲ್ಲಿ ದುಡಿಯುವಾಗ ರೋಜಗಾರ ಕೂಲಿ ಎಂದು ಪರಿಗಣಿಸಿ ಪಾವತಿಸಬೇಕು. ಹಾನಿಯಾದಾಗ ಕನಿಷ್ಠ 4 ಎಕರೆಗೆ ಕೊಡುವಷ್ಟು ಪರಿಹಾರ ಹಾಗೂ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಪಹಣಿ ಪತ್ರಿಕೆಗಳನ್ನು ನೋಡದೇ ವಾಸ್ತವ ಸ್ಥಿತಿಗೆ ಮೊದಲು ಆದ್ಯತೆ ನೀಡಬೇಕು. ಸಾಮಾನ್ಯ ರೈತರ ಬಳಿ ಕಾಗದ ಪತ್ರಗಳ ಕೊರತೆ ಇರುವುದು ಸಹಜ. ಕೆಲ ರೈತರು ವಾರಸಾ ಮಾಡಿಕೊಂಡಿರುವುದಿಲ್ಲ. ಸ್ಥಳೀಯವಾಗಿ ಗ್ರಾಮ ಲೆಕ್ಕಾಧಿಕಾರಿ, ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಪರಿಹಾರ ವಿತರಿಸಬೇಕು. ವಾರಸಾ ಪ್ರಕ್ರಿಯೆ ಸರಳಗೊಳಿಸಿ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ಅಪ್ಪಾಸಾಬ ದೇಸಾಯಿ, ಸುಭಾಶ ದಾಯಗೊಂಡ, ಬಾಳು ಮಾಯಣ್ಣ, ರಾಮಚಂದ್ರ ಫಡಕೆ, ರಾಮನಗೌಡ ಪಾಟೀಲ, ಟೋಪಣ್ಣ ಬಸರೀಕಟ್ಟಿ, ನಾಮದೇವ ದುಡುಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next