ನಾಯಕನಹಟ್ಟಿ: ಸೋಲಾರ್ ಕಂಪನಿಗಳು ಕಂದಾಯ ಬಾಕಿ ಪಾವತಿಸಬೇಕೆಂದು ಒತ್ತಾಯಿಸಿ ಸೋಮವಾರ ಎನ್. ದೇವರಹಳ್ಳಿಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಸೋಲಾರ್ ಕಂಪನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಕೆ.ಎಸ್. ದಿವಾಕರ ರೆಡ್ಡಿ, ಒಂದು ಸಾವಿರ ಎಕರೆ ಪ್ರದೇಶವನ್ನು ಸಾಜಿಟರ್ ವೆಂಚೂರ್ ಕಂಪನಿ ಸರ್ಕಾರದಿಂದ ಭೂಮಿಯನ್ನು ಗುತ್ತಿಗೆ ಪಡೆದಿದೆ. ಆದರೆ ಸಾಜಿಟರ್ ಕಂಪನಿ ನಾಮಕಾವಸ್ತೆಗೆ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಆ ಕಂಪನಿ ಇತರೆ ಕಂಪನಿಗಳಿಗೆ ಉಪ ಗುತ್ತಿಗೆ ನೀಡಿದೆ. ಈ ಕಂಪನಿಗಳು ಎನ್. ದೇವರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿವೆ. ಪ್ರತಿ ವರ್ಷ ಕಂಪನಿಗಳು
ಕಂದಾಯವನ್ನು ಪಾವತಿಸಬೇಕು.ಸರ್ಕಾರದ ನಿರ್ದೇಶನದಂತೆ ಕಂದಾಯ ಪಾವತಿಸುವಂತೆ ಹಲವಾರು ಬಾರಿ ಸೂಚನೆ ನೀಡಲಾಗಿದೆ. ಸರ್ಕಾರ ನೀಡಿರುವ ಆದೇಶಗಳಂತೆ ಇದುವರೆಗೆ ಇಲ್ಲಿನ ಕಂಪನಿಗಳು 6.8 ಕೋಟಿ ರೂ. ಕಂದಾಯ ಬಾಕಿ ಉಳಿಸಿಕೊಂಡಿವೆ ಎಂದರು.
ಆಗಸ್ಟ್ ತಿಂಗಳಲ್ಲಿ ಸರ್ಕಾರ ಪ್ರತಿ ಮೆಗಾ ವ್ಯಾಟ್ ಉತ್ಪಾದನೆಗೆ ಐದು ಸಾವಿರ ರೂ.ಗಳಂತೆ ಸೋಲಾರ್ ಕಂಪನಿಗಳು ಗ್ರಾಪಂಗೆ ತೆರಿಗೆ ಪಾವತಿಸುವಂತೆ ಆದೇಶ ನೀಡಿದೆ. ಇಲ್ಲಿನ ಕಂಪನಿಗಳು ಒಟ್ಟು 165 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ.ಸರ್ಕಾರ ಇಲ್ಲಿಯವರೆಗೆ ನೀಡಿರುವ ಆದೇಶಗಳಂತೆ ಒಟ್ಟು 6.97 ಕೋಟಿ ರೂ. ಕಂದಾಯ ಬಾಕಿಯನ್ನು ಕಂಪನಿಗಳು ಕಳೆದ ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿವೆ. ಇಲ್ಲಿ ನಾಲ್ಕು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ಕಂಪನಿ ಹೊರತುಪಡಿಸಿ ಮೂರು ಕಂಪನಿಗಳಿಂದ ಬಾಕಿ ಬರಬೇಕಿದೆ. ಜೊತೆಗೆ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ತಾಲೂಕಿನ 30 ಜನರಿಗೆ ವಾಚ್‌ಮನ್ ಉದ್ಯೋಗ ನಿಡಲಾಗಿದೆ. ಆದರೆ ಅವರಿಗೆ ಯಾವುದೇ ಸೇವಾ ಭದ್ರತೆ ಒದಗಿಸಿಲ್ಲ ಎಂದು ಆರೋಪಿಸಿದರು.
ಗ್ರಾಪಂ ಸದಸ್ಯ ಪಿ. ನಾಗರಾಜ್ ಮಾತನಾಡಿ, ಸೋಲಾರ್ ಕಂಪನಿಗಳಿರುವ ಪ್ರದೇಶ ಗೋಮಾಳವಾಗಿದ್ದು ಪಶು ಸಂಗೋಪನಾ ಇಲಾಖೆಗೆ ಸೇರಿತ್ತು. ಇಲ್ಲಿನ ಪ್ರದೇಶದಲ್ಲಿ ದನ ಕರುಗಳು ಮೇಯುತ್ತಿದ್ದವು. ಆದರೆ ಸರ್ಕಾರದ ತಪ್ಪು ನಿರ್ಧಾರದಿಂದ ಇಲ್ಲಿನ ಜನರಿಗೆಮೇವಿಲ್ಲದೆ ಪರಿಸ್ಥಿತಿ ಉಂಟಾಗಿದೆ. ಬರಗಾಲದ ಸಮಯದಲ್ಲಿ ದನ ಕರುಗಳಿಗೆ ಮೇವಿಲ್ಲದೆ ಮಾರುವ ಪರಿಸ್ಥಿತಿಗೆ ರೈತರು ಬಂದಿದ್ದಾರೆ. ಕಂಪನಿಗಳು ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಪಾವತಿಸದೆ ವಂಚಿಸುತ್ತಿವೆ. ಇನ್ನೆರಡು ದಿನಗಳಲ್ಲಿ ತೆರಿಗೆ ಪಾವತಿ ಮಾಡದೇ ಇದ್ದಲ್ಲಿ ಗ್ರಾಮಸ್ಥರೊಂದಿಗೆ ಕಂಪನಿಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ಕೆಂಚಮ್ಮ, ಉಪಾಧ್ಯಕ್ಷ ದಾದಯ್ಯ, ಸದಸ್ಯರಾದ ಲಕ್ಷ್ಮ ನಾಯ್ಕ, ಧರ್ಮವೀರ, ಪುಷ್ಪಾ, ತಿಪ್ಪಮ್ಮ, ತಿಪ್ಪೇಸ್ವಾಮಿ, ಜಯಣ್ಣ ಇದ್ದರು.