ಸಿದ್ದಾಪುರ: ತಾಲೂಕಿನ ಸಮಸ್ತ ಅಡಕೆ ಬೆಳೆಗಾರರ ವತಿಯಿಂದ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ಹಾಗೂ ಪ್ರಾಥಮಿಕ ಪತ್ತಿನ ಸಂಘಗಳ ವತಿಯಿಂದ ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ನೀಡುವಂತೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ವಾಡಿಕೆಯಂತೆ ಜೂನ್‌ದಲ್ಲಿ ಮಳೆ ಪ್ರಾರಂಭವಾಗಿದ್ದರೂ ಜುಲೈನಲ್ಲಿ ಮಳೆಯ ಕೊರತೆ ಎದುರಾಗಿತ್ತು. ಆಗಸ್ಟ್‌ದಲ್ಲಿ ವಿಪರೀತ ಗಾಳಿಯೊಂದಿಗೆ ಮಳೆ ಬಿದ್ದಿದ್ದು ಭಾರೀ ಅನಾಹುತವಾಗಿದೆ. ಸುಮಾರು ಶೇ.50 ರಷ್ಟು ಬೆಳೆ ನೆಲಕಚ್ಚಿದೆ. ಸಾಮಾನ್ಯವಾಗಿ ತಾಲೂಕಿನಲ್ಲಿ 20 ಸಾವಿರ ಎಕರೆ ಅಡಕೆ ಬೆಳೆಯುವ ಪ್ರದೇಶವಿದ್ದು 2 ಲಕ್ಷ ಕ್ವಿಂಟಲ್ ಅಡಕೆ ಉತ್ಪಾದನೆಯಾಗುತ್ತದೆ.
ಸುಮಾರು 500 ಕೋಟಿ ಮೌಲ್ಯದ ಬೆಳೆಯಿಂದ 25 ಕೋಟಿ ರೂ.ಗಳಷ್ಟು ಜಿಎಸ್‌ಟಿ ರೂಪದಲ್ಲಿ ಸರ್ಕಾರಕ್ಕೆ ಜಮಾ ಆಗುತ್ತದೆ. ಕಳೆದ ವರ್ಷ ವಿಪರೀತ ಕೊಳೆ ರೋಗದಿಂದಾಗಿ ಶೇ.50 ಬೆಳೆ ಹಾನಿಗೊಳಗಾಗಿತ್ತು. ಈ ವರ್ಷ ಗಾಳಿ ಮಳೆಗೆ ಅಡಕೆ ಮರಗಳ ಜೊತೆ ಬೆಳೆಯೂ ನೆಲಕಚ್ಚಿದೆ. ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ರೈತರು ಕಂಗಾಲಾಗಿದ್ದಾರೆ. ಅದರ ಮೇಲೆ ಕೊಳೆ ರೋಗದ ಲಕ್ಷಣವೂ ಕಂಡುಬರುತ್ತಿದ್ದು ಅಡಕೆ ಕಾಯಿಗಳು ಉದುರಹತ್ತಿವೆ. ಮಂಗ ಹಾಗೂ ಇತರ ಕಾಡು ಪ್ರಾಣಿಗಳ ಉಪಟಳದಿಂದಾಗಿ ಬೆಳೆ ರಕ್ಷಣೆ ಮಾಡಿಕೊಳ್ಳಲಾಗುತ್ತಿಲ್ಲ.
ಸಭಾಧ್ಯಕ್ಷರಾದ ತಾವು ಈಗಾಗಲೇ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಯ ಅರಿವು ಮಾಡಿಕೊಂಡಿದ್ದೀರಿ. ಈಸಂಕಷ್ಟ ಸಮಯದಲ್ಲಿ ಹಾನಿಗೊಳಗಾಗಿರುವ ಬೆಳೆಯ ಸಮೀಕ್ಷೆ ನಡೆಯುವಂತೆ ಮಾಡಿ ಹೆಚ್ಚಿನ ಪರಿಹಾರ ದೊರೆಯುವಂತೆ ಪ್ರಯತ್ನ ನಡೆಸಿ ಅಡಕೆ ಬೆಳೆಗಾರರು ಜೀವಹಿಡಿದಿಟ್ಟುಕೊಳ್ಳುವಲ್ಲಿ ಸಹಕರಿಸಬೇಕು ಎಂದು ಮನವಿಯಲ್ಲಿಕೋರಲಾಗಿದೆ.
ಮನವಿಯನ್ನು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ನೀಡಿದರು. ಮನವಿ ಸ್ವೀಕರಿಸಿದ ಕಾಗೇರಿಯವರು ಸರಕಾರದ ನಿಯಮಾವಳಿಯಂತೆ ಶೇ.33 ರಷ್ಟು ಬೆಳೆಹಾನಿಯಾದಲ್ಲಿ ಪರಿಹಾರ ದೊರೆಯುತ್ತದೆ. ಆದರೂ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸುತ್ತೇನೆ. ಈವರ್ಷ ಬೆಳೆವಿಮೆ ಸಿಗಲಿದೆ ಎನ್ನಲಾಗಿದೆ. ಅವರವರ ಪೀಕಪಾಣಿ (ಬೆಳೆ ಮಾಹಿತಿ ದಾಖಲಾತಿ) ಅವರವರೇ ಮಾಡುವಂತೆ ತಿಳಿಸಲಾಗಿದೆ. ಸಹಕಾರಿ ಸಂಘಗಳಿಗೆ ಕೃಷಿ ಭೂಮಿ ಖರೀದಿಗೆ ಅವಕಾಶವಿದೆ ಎಂದು ತಿಳಿಸಿದರು.
ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಪ್ರತಿನಿಧಿಗಳಾದ ಎಂ.ಆರ್. ಹೆಗಡೆ ನೇಗಾರ, ಜಿ.ಎಂ. ಭಟ್ಟ ಕಾಜಿನಮನೆ, ಎಂ.ಆರ್. ಭಟ್ಟ ತಟ್ಟಿಕೈ, ಕೆ.ಕೆ. ನಾಯ್ಕ ಸುಂಕತ್ತಿ, ರಮೇಶ ಹೆಗಡೆ ಕೊಡ್ತಗಣಿ, ಎಂ.ಐ. ನಾಯ್ಕ ಕೆಳಗಿನಸಸಿ, ಸಿ.ಪಿ. ಗೌಡರ್ ಹೆಗ್ಗೆಕೊಪ್ಪ, ಎಂ.ಜಿ. ಜೋಶಿ ಈರಗೊಪ್ಪ, ರಾಘವೇಂದ್ರ ಶಾಸ್ತ್ರಿ ಬಿಳಗಿ, ಎಂ.ಐ. ನಾಯ್ಕ ಹುಲಿಮನೆ, ರಮಾನಂದ ಹೆಗಡೆ ಮಳಗುಳಿ, ಗಣೇಶ ನಾರಾಯಣ ಭಟ್ಟ ಕೆರೆಹೊಂಡ, ಸುಧೀರ ಡರ್ ಹೆಗ್ಗೊಡ್ಮನೆ, ಕೆ.ಆರ್. ವಿನಾಯಕ ಕೋಲಸಿರ್ಸಿ ಇತರರು ಪಾಲ್ಗೊಂಡಿದ್ದರು.