ಯಳಂದೂರು: ದಲಿತರ ಬೀದಿಗೆ ಉತ್ಸವ ಮೂರ್ತಿಯನ್ನು ತರಬೇಕು ಎಂದು ಮನವಿ ಮಾಡಿದ್ದಕ್ಕಾಗಿ ಕೂಲಿ ಕಾರ್ಮಿಕರೊಬ್ಬರಿಗೆ ಗ್ರಾಮದ ಯಜಮಾನರೆಲ್ಲರೂ ಸೇರಿ ಬರೋಬ್ಬರಿ 50,101 ರೂ. ದಂಡ ವಿಧಿಸಿರುವ ಅಮಾನವೀಯ ಘಟನೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಜರುಗಿದೆ.
ಹೊನ್ನೂರು ಗ್ರಾಮದ ದಲಿತರ ಬೀದಿಯ ನಿವಾಸಿ ನಿಂಗರಾಜು ದಂಡನೆಗೊಳಪಟ್ಟ ವ್ಯಕ್ತಿ. ಹೊನ್ನೂರು ಗ್ರಾಮದಲ್ಲಿ ಪ್ರತಿವರ್ಷ ಚಾಮುಂಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ ನಡೆಯುತ್ತದೆ. ಈ ಸಂಬಂಧ ಇತ್ತೀಚೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಉತ್ಸವ ಮಾಡಲು ಪೂರ್ವಭಾವಿ ಸಭೆ ನಡೆಸಲಾಗಿತ್ತು. ಇದಾದ ಬಳಿಕ ಗ್ರಾಮದ ನಿಂಗರಾಜು, ಈ ದೇಗುಲವು ಸರ್ಕಾರಕ್ಕೆ ಸೇರಿದ್ದು, ನವರಾತ್ರಿ ವೇಳೆ ಉತ್ಸವವು ಸವರ್ಣೀಯರ ಬೀದಿಗೆ ಮಾತ್ರ ನಡೆಯುತ್ತದೆ. ಇದನ್ನು ದಲಿತರ ಬೀದಿಗೂ ವಿಸ್ತರಿಸಬೇಕು ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು.
ಇದಾದ ನಂತರ ಗ್ರಾಮದಲ್ಲಿ 13 ಕೋಮಿನ ಯಜಮಾನರು ಹಾಗೂ ಮುಖಂಡರು ಸಭೆ ಸೇರಿ ನಿಂಗರಾಜು ಅವರನ್ನು ಕರೆದು, “ಗ್ರಾಮದಲ್ಲಿ ಈ ಹಿಂದೆ ಇಲ್ಲದ ನಿಯಮಗಳನ್ನು ಮಾಡಿ ಎಂದು ನೀನು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದೀಯಾ. ಹೀಗಾಗಿ ನಿನಗೆ50,101 ರೂ. ದಂಡ ಹಾಕಲಾಗಿದೆ. ಇದನ್ನು ಕಡ್ಡಾಯವಾಗಿ ಪಾವತಿಸಲೇಬೇಕು’ ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಆದರೆ, ಕೂಲಿ ಕಾರ್ಮಿಕರಾಗಿರುವ ನಿಂಗರಾಜು ಹಣ ವಿಲ್ಲದೆ ಪರದಾಡುತ್ತಿದ್ದ ಸಂದರ್ಭದಲ್ಲಿ ಅವರ ಪತ್ನಿಮಹಾದೇವಮ್ಮ ತಮ್ಮ ಬಳಿ ಇದ್ದ ಒಡವೆಗಳನ್ನು ಒತ್ತೆ ಇಟ್ಟು, ಸಾಲವನ್ನು ಮಾಡಿ ದಂಡದ ಮೊತ್ತವನ್ನು ಪಾವತಿಸಿದ್ದಾರೆ.
ತಹಶೀಲ್ದಾರ್‌ಗೆ ಮನವಿ: ಈ ಸಂಬಂಧ ನಿಂಗರಾಜು ತಮ್ಮ ಪತ್ನಿ ಮಹಾದೇವಮ್ಮ ಜೊತೆಗೂಡಿ ಶನಿವಾರ ತಹ ಶೀಲ್ದಾರ್ ಸುದರ್ಶನ್ ಅವರನ್ನುಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ನಮ್ಮ ಗ್ರಾಮದ ಚಾಮುಂಡೇಶ್ವರಿ ದೇಗುಲವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳ ಪಟ್ಟಿದೆ. ದಲಿತರ ಬೀದಿಗೆ ಉತ್ಸವ ಮೂರ್ತಿ ಬರುವಂತೆ ನಾನು ಮನವಿ ಪತ್ರ ಸಲ್ಲಿಸಿದ್ದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ಮೇಲೆ ಷಡ್ಯಂತ್ರ ರೂಪಿಸಲಾಗಿದೆ. ಬಡವನಾಗಿರುವ ನನಗೆ 50 ಸಾವಿರ ರೂ. ಹಣ ಕಟ್ಟುವುದು ಕಷ್ಟವಾಗಿತ್ತು. ನಾನು ಇನ್ನೂ ಸಾಲವಂತನಾಗಿದ್ದೇನೆ. ಕೂಲಿಯಿಂದ ಜೀವನ ನಡೆಸುವ ನನಗೆ ಈ ಹಣ ಅತ್ಯಮೂಲ್ಯವಾಗಿದೆ. ಇದರಿಂದ ನಾನು ಮತ್ತು ನನ್ನ ಕುಟುಂಬ ಮಾನಸಿಕವಾಗಿ ನೊಂದಿದ್ದೇವೆ. ಹಾಗಾಗಿ ಕೂಡಲೇ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು
. ಈ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಸುದರ್ಶನ್, ಈ ಸಂಬಂಧ ಗ್ರಾಮಸ್ಥ ರೊಂದಿಗೆ ಮಾತುಕತೆ ನಡೆಸಿ ನಿಮ್ಮ ಮನವಿಗೆ ಸ್ಪಂದಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.