ನಂಜನಗೂಡು: ಜೀವ ನದಿ ಕಪಿಲೆಯ ದಡದಲ್ಲಿರುವ ನಂಜನಗೂಡು ನಗರದ ಕುಡಿಯುವ ನೀರು ಹಾಗೂ ಹದಗೆಟ್ಟ ರಸ್ತೆಗಳ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ನಗರಸಭಾ ಸದಸ್ಯರು ಪ್ರತಿಭಟನೆ ನಡೆಸಿದರು.
ಸೋಮವಾರ ನಗರಸಭಾ ಸದಸ್ಯರು ತಮ್ಮದೇ ಆಡಳಿತದ ಅಧಿಕಾರಿಗಳ ಕಾರ್ಯವೈಖರಿಯಲ್ಲಿ 24*7 ಕುಡಿಯುವ ನೀರಿನ ಸರಬರಾಜು ಕುಂಠಿತಗೊಂಡಿದೆ. ಪಟ್ಟಣದ ರಸ್ತೆಗಳು ಸಂಚಾರಕ್ಕೆ ಕಂಟಕ ಪ್ರಾಯವಾಗಿದೆ ಎಂದು ಅಧಿಕಾರಿಗಳ ವಿರುದ್ಧ ನಗರಸಭಾ ಕಚೇರಿ ಆವರಣದಲ್ಲಿಯೇ ಧಿಕ್ಕಾರ ಮೊಳಗಿಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಕುಡಿಯುವ ನೀರು, ರಸ್ತೆ, ಚರಂಡಿಗಳ ಅಭಿವೃದ್ಧಿಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿದ್ದರೂ ಈ ಅವ್ಯವಸ್ಥೆ ಸರಿಪಡಿಸಲು ಇಲ್ಲಿನ ಕೆಲವು ಸೋಮಾರಿ ಅಧಿಕಾರಿಗಳೇ ಕಾರಣ ಎಂದು ಪ್ರತಿಭಟನಾ ನಿರತ ಸದಸ್ಯರು ಆರೋಪಿಸಿದರು. ಅಧಿಕಾರಿಗಳ ಈ ನಡತೆಯಿಂದಾಗಿ ಚುನಾಯಿತ ಪ್ರತಿನಿಧಿಗಳಾದ ತಾವೆಲ್ಲಾ ಜನತೆಯ ಮುಂದೆ ತಲೆ ಎತ್ತಿ ನಡೆದಾಡದಂತಾಗಿದೆ.
ತಕ್ಷಣ ಅವ್ಯವಸ್ಥೆ ಸರಿಪಡಿಸಿ ರಸ್ತೆ ದುರಸ್ತಿ ಮಾಡಿ ಜನತೆಯ ಮುಂದೆ ತಿರುಗಾಡಲು ಅವಕಾಶ ನೀಡಿ. ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ನಮ್ಮೂರು ಇಂದು ಅವ್ಯವಸ್ಥೆಯ ಗೂಡಾಗಲು ಇಂಥಹ ಅಧಿಕಾರಿಗಳೇ ಕಾರಣ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭಾ ಆಯುಕ್ತ ವಿಜಯ್, ಅಧ್ಯಕ್ಷೆ ಪುಷ್ಪಲತಾ, ಪ್ರದೀಪ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮದನ್ ಹಾಗೂ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಮತ್ತು ನಗರದ ಮುಖಂಡ ಯು .ಎನ್. ಪದ್ಮನಾಭ್ ರಾವ್ ಕುಡಿಯುವ ನೀರು ಹಾಗೂ ಹದಗೆಟ್ಟ ರಸ್ತೆ ಸರಿಪಡಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ಸದಸ್ಯರ ಮನವೊಲಿಸಿದರು.
ಪ್ರತಿಭಟನೆಯಲ್ಲಿ ಚಲುವರಾಜು, ರಾಜೇಶ್, ಮಂಜುನಾಥ್, ಗಜಾ, ಖಾಲಿದ್. ಮೀನಾಕ್ಷಿ, ಸುಂದರ್, ಭಾಸ್ಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.