ರೋಣ: ತಾಲೂಕಿನಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು ಎಂದು ಆಗ್ರಹಿಸಿ ಕೃಷಿಕ ಸಮಾಜ ರೋಣ ಘಟಕದ ವತಿಯಿಂದ ಸೋಮವಾರ ರೋಣ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಬಸವರಾಜ ಸಜ್ಜನರ ಮಾತನಾಡಿ, ಮುಂಗಾರಿನಲ್ಲಿ ಅತಿವೃಷ್ಟಿ ಉಂಟಾದ ಕಾರಣದಿಂದಾಗಿ ರೈತರು ಬೆಳೆದ ಬೆಳೆಗಳು ಮಳೆಗೆ ಸಿಲುಕಿ ಹಾಳಾಗಿವೆ. ಈರುಳ್ಳಿ ಸೇರಿದಂತೆ ಹಲವು ಮುಂಗಾರು ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಇದರಿಂದಾಗಿ ತೀವ್ರ ಸಂಕಷ್ಟ ಉಂಟಾಗಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ ಖರ್ಚು ಸಹ ರೈತರ ಕೈಗೆ ಬರಲಿಲ್ಲ. ರೈತರಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಹಿಂಗಾರು ಮಳೆಯಾಗಿದ್ದು, ಎಲ್ಲೆಡೆ ಸಮೃದ್ಧವಾದ ಕಡಲೆ ಬೆಳೆ ಬೆಳೆದು ನಿಂತಿದೆ.
ಈ ಭಾಗದ ಹಿಂಗಾರು ಪ್ರಮುಖ ಬೆಳೆಗಳಲ್ಲಿ ಕಡಲೆ ಬೆಳೆಯೂ ಪ್ರಮುಖವಾಗಿದ್ದು, ಸದ್ಯ ಕಡಲೆಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿದೆ. ಆದ್ದರಿಂದ ಸರ್ಕಾರವು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಪ್ರತಿ ರೈತರ ಖಾತೆಯಿಂದ 25 ಕ್ವಿಂಟಲ್‌ನಂತೆ ಕಡಲೆ ಖರೀದಿಸಬೇಕು. ಕೇಂದ್ರವನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದರು.
ರೈತ ಮುಖಂಡ ತಮ್ಮನಗೌಡ ಶೀಲವಂತರ ಮಾತನಾಡಿ, ಸತತ 4, 5 ವರ್ಷಗಳ ಕಾಲ ಬರಗಾಲ, ಅದಾದ ನಂತರ ಪ್ರಕೃತಿ ವಿಕೋಪದಿಂದ ಧಾರಾಕಾರವಾಗಿ ಸುರಿದ ಮಳೆಗೆ ಈ ವರ್ಷ ಮುಂಗಾರು ಬೆಳೆಗಳು ಕೊಳೆತು ಹೋದವು. ಅದರ ಮಧ್ಯೆ ಹಿಂಗಾರಿನ ಪ್ರಮುಖ ಬೆಳೆಯಾದ ಕಡಲೆ ಚೆನ್ನಾಗಿ ಬೆಳೆದಿದ್ದು, ಹೆಚ್ಚಿನ ಇಳುವರಿ ಬರುವ ಲಕ್ಷಣವಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿಸಲು ಮುಂದಾಗಬೇಕು ಎಂದರು.
ಸೋಮನಗೌಡ ಸುರಕೋಡ, ನೀಲಪ್ಪಗೌಡದ್ಯಾಪನಗೌಡ್ರ, ರಾಮನಗೌಡ ಬದಾಮಿ, ಶರಣಪ್ಪ ಬಾವಿ, ಶಂಕರಭಟ್ ಪೂಜಾರ, ಶಿವಪ್ಪ ಸಜ್ಜನರ, ಭರಮಪ್ಪ ಹೂಗಾರ, ರವಿ ದಾನರಡ್ಡಿ, ಫಕ್ಕೀರಸಾಬ್ ರೋಣದ, ನೆಹರು ಕಂಬಳಿ ಸೇರಿದಂತೆ ಮತ್ತಿತರರು ಇದ್ದರು