ಬಾಗಲಕೋಟೆ: ಶಿಕ್ಷಣ ಇಲಾಖೆಯ ನಿರ್ದೇಶಕರ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲೆಯ ಶಿಕ್ಷಕರು, ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ಶಿಕ್ಷಕರು, ಶಿಕ್ಷಣ ಇಲಾಖೆ ನಿರ್ದೇಶಕರು ಹೊರಡಿಸಿರುವ ಆದೇಶವನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಾಗೇನವರ ಮಾತನಾಡಿ, 2014ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿಗಳ ವರ್ಗಕ್ಕೆ ಸೀಮಿತಗೊಳಿಸಿ ಆದೇಶಿಸಿದ್ದಾರೆ. ಇದರಿಂದ ಪದವೀಧರ ಶಿಕ್ಷಕರಿಗೆ ಅನ್ಯಾಯ ಮಾಡಿದಂತಾಗಿದೆ. ಕೂಡಲೇ ಈ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ, ಪದವೀಧರ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗಿಲ್ಲ. ಹೀಗಾಗಿ ಕೂಡಲೇ ಶಿಕ್ಷಕರ ವರ್ಗಾವಣೆ ಆರಂಭಿಸಬೇಕು. ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗಳಲ್ಲಿನ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಗುರುತಿಸುವಾಗ ಮುಖ್ಯಾಧ್ಯಾಪಕ, ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತುಡಿಸಿ ಹಾಗೂ ಮಾಧ್ಯಮವಾರು, ಪ್ರಾದೇಶಿಕವಾರು ವಿಶೇಷ ನಿಯಮ ರೂಪಿಸಿ, ಹೆಚ್ಚುವರಿ ಪ್ರಕ್ರಿಯೆ ಮಾಡಬೇಕು. 6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯಾಧ್ಯಾಪಕರಿಗೆ 10, 15, 20, 25, 30 ವರ್ಷಗಳ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪ ನಿರ್ದೇಶಕರ ಹುದ್ದೆವರೆಗೂ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ಬಳ್ಳಾರಿ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಎಸ್.ಎಚ್. ಕಂದಗಲ್, ವಿ.ಕೆ. ಪತ್ತಾರ, ಪರಶುರಾಮ ಪಮ್ಮಾರ, ಅರ್ಜುನ ಕಾಖಂಡಕಿ, ಕೆ.ಎಂ. ಕುಗಾಟೆ, ಎಸ್.ಪಿ. ಹೂಗಾರ, ಬಿ.ಎಸ್. ಸಜ್ಜನ, ಎಸ್.ಬಿ. ಅನಂತಪುರ, ಸಿ.ಜಿ. ಕಡಕೋಳ, ಜಿ.ಎನ್. ದಾಸರಡ್ಡಿ, ಎಂ.ಬಿ. ಒಂಟಗೋಡಿ, ಸಿ.ಬಿ. ಕಲ್ಲೋಳ, ಎಸ್.ಎ. ಸಾರಂಗಮಠ, ವೈ.ಎಸ್. ಮಜ್ಜಗಿ, ಪಿ.ಎಸ್. ತಿರಕಪ್ಪನವರ, ಎಂ.ಎಂ. ಮಕಾನದಾರ, ಪಿ.ಕೆ. ಚಲವಾದಿ ಸೇರಿದಂತೆ ಜಿಲ್ಲೆಯ ಆರೂ ತಾಲೂಕಿನ ಸಹಸ್ರಾರು ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.