Advertisement
ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಮಕ್ಕಳ ಗ್ರಾಮ ಸಭೆಯಲ್ಲಿ ಹಳೆಯಂಗಡಿ ಯುಬಿಎಂಸಿ ಶಾಲೆಯ ನಿತ್ಯಾನಂದ ಈ ಬಗ್ಗೆ ಸಭೆಯಲ್ಲಿ ಆಗ್ರಹಿಸಿ, ಬಾಲ ಕಾರ್ಮಿಕರ, ಲೈಂಗಿಕ ಶೋಷಣೆಯ ವಿರುದ್ಧ, ಶೀಘ್ರವಾಗಿ ಸ್ಪಂದಿಸಲು ಮಕ್ಕಳ ಚೈಲ್ಡ್‌ಲೈನ್ ಕೇಂದ್ರವನ್ನು ಮೂಲ್ಕಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಿದಲ್ಲಿ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಚೈಲ್ಡ್‌ಲೈನ್ ಕೇಂದ್ರದ ಪ್ರತಿನಿಧಿ ದೀಕ್ಷಿತ್, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಏಕೈಕ ಕೇಂದ್ರವನ್ನು ಮಂಗಳೂರಿನಲ್ಲಿ ನಿರ್ವಹಿಸಲಾಗುತ್ತಿದೆ. ಮಾಸಿಕವಾಗಿ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ತಾಲೂಕು ಮಟ್ಟದಲ್ಲಿಯೂ ಕೇಂದ್ರದ ಬೇಡಿಕೆ ಇದೆ. ಈ ಬಗ್ಗೆ ಈ ಗ್ರಾಮಸಭೆ ಸಹಿತ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಇಲಾಖೆಗೆ ನೀಡಿದಲ್ಲಿ ಅದನ್ನು ಮೇಲಾಧಿಕಾರಿಗಳಿಗೆ ರವಾನಿಸಿ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದರು.
Related Articles
ಮಕ್ಕಳಿಂದ ಸಭೆಯ ಆರಂಭದಲ್ಲಿ ಶಾಲಾ ವಠಾರದಲ್ಲಿ ವಿವಿಧ ಘೋಷಣೆಗಳ ಫಲಕಗಳೊಂದಿಗೆ ಆಕರ್ಷಕ ಜಾಥಾ ನಡೆಸಲಾಯಿತು. ಹಾಡು, ನೃತ್ಯ, ಪ್ರಹಸನ, ಜಾಗೃತಿ ಕಿರು ನಾಟಕದ ಜತೆಗೆ ಮಕ್ಕಳೇ ಸಂಪೂರ್ಣ ಕಾರ್ಯಕ್ರಮ ನಿರ್ವಹಿಸಿದರು. ಕಟೀಲು ಪದವಿ ಪೂರ್ವ ಕಾಲೇಜಿನ ಉಮೇಶ್ ಉದ್ಘಾಟಿಸಿದರು. ಬೊಳ್ಳೂರು ಶಾಲೆಯ ವಿದ್ಯಾರ್ಥಿ ನಾಯಕ ಸನತ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್‌ನ ಅಧ್ಯಕ್ಷೆ ಜಲಜಾ ಶುಭ ಹಾರೈಸಿದರು.
Advertisement
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಶೋಧಾ, ಮಂಗಳೂರು ಚೈಲ್ಡ್ ಲೈನ್‌ನ ದೀಕ್ಷಿತ್, ಆರೋಗ್ಯ ಸಹಾಯಕಿ ಗೀತಾ, ಮೂಲ್ಕಿ ಪೊಲೀಸ್ ಸಿಬಂದಿ ಸಿದ್ದು ಎಸ್.ಬಿ., ಶಾಲಾ ಮುಖ್ಯ ಶಿಕ್ಷಕ ಜಯರಾಂ, ಪಂಚಾಯತ್ ಪ್ರಭಾರ ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಶ್ರೀಶೈಲಾ ಮಾಹಿತಿ ನೀಡಿದರು. ಮಕ್ಕಳ ಸಂವಹನಕಾರರಾಗಿ ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ನಿರ್ವಹಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಜೀಜ್, ಚಂದ್ರ ಕುಮಾರ್ ಸಸಿಹಿತ್ಲು, ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಕಾವ್ಯಾ, ಜೋಯ್ಲಿನ್, ಹಳೆಯಂಗಡಿ ಶಾಲೆಯ ಧನುಶ್, ಉರ್ದು ಶಾಲೆಯ ಬೀಫಾತುಮ್ಮಾ, ಯುಬಿಎಂಸಿ ಶಾಲೆಯ ಜನ್‌ಸಿನ್ ಮಿರೋಲ್, ಸಿಎಸ್‌ಐ ಶಾಲೆಯ ದಿಶಾ, ಸಸಿಹಿತ್ಲು ಶಾಲೆಯ ಪ್ರಣಮ್ಯಾ ಉಪಸ್ಥಿತರಿದ್ದರು. ಬೊಳ್ಳೂರು ಶಾಲೆಯ ಸಬ್ರಿನಾ ನಿರೂಪಿಸಿದರು.
ಸಮಸ್ಯೆಗಳನ್ನು ತೆರೆದಿಟ್ಟ ಮಕ್ಕಳುನಮ್ಮ ಶಾಲೆಯ ಕಟ್ಟಡದ ಪ್ರಥಮ ಮಹಡಿಯಿಂದ ಸಿಮೆಂಟ್‌ನ ಗೆಟ್ಟಿಗಳು ಕೆಳಗೆ ಬೀಳುತ್ತಿದೆ, ಕಿಟಕಿಗಳಿಲ್ಲ, ಚರಂಡಿಯಿಂದ ಕೆಟ್ಟ ವಾಸನೆ ಬರುತ್ತಿದೆ, ತ್ಯಾಜ್ಯವನ್ನು ಶಾಲೆಯ ಪಕ್ಕದಲ್ಲಿಯೇ ಸುರಿಯಲಾಗುತ್ತಿದೆ, ಸೂಕ್ತ ಆಟದ ಮೈದಾನ ಇಲ್ಲ ಎಂದು ಬೊಳ್ಳೂರು ಶಾಲೆಯ ಶಬ್ರಿನಾ, ಸೂರಜ್, ರಂಜಿತ್, ಜಾಹಿದ್ ಮಹಮದ್ ದೂರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅನಿತಾ ಕ್ಯಾಥರಿನ್, ಚರಂಡಿಗೆ ಮನೆಯ ನೀರು ಅದಕ್ಕೆ ಬಿಡಬಾರದು ಅವರವರ ಜಮೀನಿನಲ್ಲಿಯೇ ಇಂಗು ಗುಂಡಿ ರಚಿಸಿಕೊಳ್ಳಬೇಕು. ಇಂತಹ ಮನೆಯವರಿಗೆ ಸಭೆಯಲ್ಲಿ ಚರ್ಚಿಸಿ ನೋಟಿಸು ನೀಡಲಾಗುವುದು. ಶಾಲೆ ಸ್ವಚ್ಛವಾಗಿಡಲು ಮಕ್ಕಳೂ ಶ್ರಮಿಸುವಂತೆ ಶಿಕ್ಷಕರು ಸಹಕರಿಸಬೇಕು ಎಂದರು.