ತಿ.ನರಸೀಪುರ: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಮುಸ್ಲಿಮರು ದಲಿತ ಸಂಘರ್ಷ ಸಮಿತಿ(ದಸಂಸ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕೇಂದ್ರದ ವಿರುದ್ಧ ಘೋಷಣೆ: ಪಟ್ಟಣದ ತಾಲೂಕು ಕಚೇರಿ ಮಿನಿ ವಿಧಾನಸೌಧದ ಎದುರು ದಸಂಸದ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಮುಸ್ಲಿಮರು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿ ಮಾನವ ವಿರೋಧಿ ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಾ ಪ್ರತಿಭಟನಾಧರಣಿ ಪ್ರಾರಂಭಿಸಿದರು.
ಪ್ರತಿಭಟನೆ ಪ್ರಾರಂಭದಲ್ಲೇ ರಾಷ್ಟ್ರಧ್ವಜ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಿಡಿದು ಭಾರತಾಂಬೆಗೆ ಜೈಕಾರ ಕೂಗುತ್ತಾ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಜನವಿರೋಧಿ, ಅವೈಜ್ಞಾನಿಕ ಎರಡು ಕಾಯ್ದೆ ಹಿಂಪಡೆಯಬೇಕು. ನಾವು ಕೂಡ ಭಾರತೀಯರೇ, ನಾವ್ಯಾರೂ ಪೌರತ್ವ ಸಾಬೀತುಪಡಿಸಬೇಕಾಗಿಲ್ಲ. ಇಂತಹ ಧರ್ಮ ವಿರೋಧಿ ಕಾಯ್ದೆ ಕೂಡಲೇ ಹಿಂಪಡೆಯಬೇಕು ಎಂದು ಗಟ್ಟಿ ಧ್ವನಿಯಲ್ಲೇ ಒಮ್ಮತದ ಒತ್ತಾಯ ಮೊಳಗಿಸಿದರು.
ಕೇಂದ್ರದ್ದು ಮಲತಾಯಿ ಧೋರಣೆ: ಎನ್‌ಕೆಎಫ್ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಎನ್.ಕೆ.ಫರೀದ್ ಮಾತನಾಡಿ, ದೇಶದ ವಿಚಾರ ಬಂದಾಗ ಮುಸ್ಲಿಮರು ಎದೆಯನ್ನೊಡ್ಡಿ ದೇಶ ಉಳಿಸಿಕೊಂಡು ಪ್ರಾಣ ನೀಡಿದ್ದಾರೆ ಹೊರತು ಹೆದರಿ ಬೆನ್ನು ತಿರುಸಿ ಹೋದವರಲ್ಲ. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಸೇರಿದಂತೆ ಆಜಾದ್, ಹಿದಾಯತ್ ಉಲ್ಲಾ ಹಾಗೂ ಡಾ.ಜಾಕೀರ್ ಹುಸೇನ್ ನೀಡಿದಂತಹ ಕೊಡುಗೆ ಮರೆತು ಈಗಿನ ಭಾರತ ಸರ್ಕಾರ ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆ ತರುವ ಮೂಲಕ ಮುಸ್ಲಿಮರ ಮೇಲೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕೇಂದ್ರದ ಅಪಾಯಕಾರಿ ಕಾಯ್ದೆಗಳೆರಡು ಸಂವಿಧಾನದಲ್ಲಿ ಸಮಾನತೆ ಪೌರತ್ವ ನೀಡುವ 14ನೇ ವಿಧಿಗೆ ವಿರುದ್ಧವಾಗಿದೆ. ಆದ್ದರಿಂದ ಭಾರತ ಸರ್ಕಾರ ಕೂಡಲೇ ಈ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಲೋಪ ಮುಚ್ಚಲು ಕಾಯ್ದೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕತೆ ಹಾಗೂ ಆಡಳಿತ ಲೋಪವನ್ನು ಮುಚ್ಚಿಕೊಳ್ಳಲು ದೇಶದಲ್ಲಿ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಅಯೋಧ್ಯೆ ರಾಮ ಮಂದಿರ ವಿವಾದ ಬಗೆಹರಿದ ಮೇಲೆ ಹಿಂದು ಮುಸ್ಲಿಮ್ ಕಿಚ್ಚನ್ನು ಹೊತ್ತಿಸಿ, ಅಮಾಯಕ ಮುಗ್ಧ ಯುವಕರಿ ಹಿಂದು ಧರ್ಮದ ಗುಂಗಿನಲ್ಲಿ ತೇಲುವಂತೆ ಮಾಡಿ, ಕುರ್ಚಿ ಭದ್ರಪಡಿಸಿಕೊಂಡಿದ್ದಾರೆ.
ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಯಿಂದ ಮುಸ್ಲಿಮರಷ್ಟೇ ಅಲ್ಲ ಹಿಂದೂಗಳು ಕೂಡ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಈಗಾಗಲೇ ಅಸ್ಸಾಂ ರಾಜ್ಯದಲ್ಲಿನ ಜನರು ತೊಂದರೆಗೆ ಸಿಲುಕಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಕಾರರು ತಹಶೀಲ್ದಾರ್ ಡಿ.ನಾಗೇಶ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಿದರು. ಮೂರು ತಾಸುಗಳ ಕಾಲ ಶಾಂತಿಯುತವಾಗಿ ನಡೆದ ಪ್ರತಿಭಟನೆಗೆ ಸಿಪಿಎ ಎಂ.ಅರ್.ಲವ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು.
ತಾಪಂ ಸದಸ್ಯ ಎಂ.ರಮೇಶ್, ಮೌಲಾನಗಳಾದ ಷಫಿ ಅಹ್ಮದ್, ಇನಾಂ ಉಲ್ಲಾ, ಖುದ್ದೂಷ್, ಜೀಸಾನ್, ಪ್ರತಿಭಟನೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಸಂಚಾಲಕ ಬಿ.ಮನ್ಸೂರ್ ಆಲಿ, ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಮುನಾವರ ಪಾಷ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜದ್ ಖಾನ್, ಮುಖಂಡರಾದ ಸಗೀರ್ ಅಹ್ಮದ್, ಮಸೂರ್, ಆಸ್ವಾನ್, ಇಮ್ರಾನ್, ಖಲೀಲ, ಸಲೀಂ, ನವೀದ್, ಜಬಿ, ಸೈಯದ್, ಮೊಹೀನ್ ಖಾನ್, ನಾಸೀರ್ ಹುಸೇನ್, ಹಮೀದ್, ರಿಯಾಜ್ ಅಹ್ಮದ್ ಹಾಗೂ ಇನ್ನಿತರರು ಭಾಗವಹಿಸಿದ್ದರು.