ಮುಧೋಳ: ಭೀಕರ ಪ್ರವಾಹಕ್ಕೆ ರಾಜ್ಯದ 22 ಜಿಲ್ಲೆಗಳಲ್ಲಿ ಜನಸಾಮಾನ್ಯರು, ಜಾನುವಾರುಗಳು ತೀವ್ರ ತೊಂದರೆ ಅನುಭವಿಸಿವೆ. ಸಂತ್ರಸ್ತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂತ್ರಸ್ತರ ಸಮಸ್ಯೆ ಆಲಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಆರೋಪಿಸಿದರು.
ಮುಧೋಳ ಹಾಗೂ ಲೋಕಾಪುರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಬೇಡದ ಕೂಸಾಗಿರುವುದರಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ನೆರವು, ಸಹಾಯ, ಸಹಕಾರ ನೀಡುತ್ತಿಲ್ಲ ಎಂದರು.
ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಕ್ಷೇತ್ರದಲ್ಲಿ ಘೋಷಿಸಿರುವಂತೆ, ಉಪಮುಖ್ಯಮಂತ್ರಿಗಳ ಕ್ಷೇತ್ರವಾದ ಮುಧೋಳದಲ್ಲಿಯೂ ಅದೇ ರೀತಿ ಪರಿಹಾರ ಘೋಷಿಸಬೇಕು. ಜಲಾವೃತಗೊಂಡ ಎಲ್ಲ ಗ್ರಾಮಗಳನ್ನು ಸ್ಥಳಾಂತರಿಸಿ ಯುಕೆಪಿ ಮಾದರಿಯಲ್ಲಿ ಶಾಶ್ವತ ಪರಿಹಾರ ಒದಗಿಸಬೇಕು. ಹಾನಿಗೊಳಗಾದ ರೈತರ ಹೊಲಗಳಿಗೆ ಪ್ರತಿ ಎಕರೆಗೆ ರೂ.1 ಲಕ್ಷ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ 10 ಲಕ್ಷ ಪರಿಹಾರ, ಹಾಗೂ ಮನೆ ನಿರ್ಮಿಸುವವರೆಗೂ ಪ್ರತಿ ತಿಂಗಳು 10 ಸಾವಿರ ಬಾಡಿಗೆ ಹಣ ನೀಡಬೇಕು. ಅವಳಿ ಜಿಲ್ಲೆಗಳಲ್ಲಿ ಎರಡನೇ ಬಾರಿ ಪ್ರವಾಹ ಬಂದಿದ್ದು, ಮತ್ತೆ ನಿರಾಶ್ರಿತರು ತೊಂದರೆಗೀಡಾಗಿದ್ದಾರೆ. ಆದ್ದರಿಂದ ತಾತ್ಕಾಲಿಕ ಶೆಡ್ ನಿರ್ಮಿಸಬೇಕು. ರಾಜ್ಯದಲ್ಲಿ ಸಂಭವಿಸಿರುವ ಜಲ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿದರು.
ಕೆಲವು ಕಡೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರಾಜಕೀಯ ಪಕ್ಷಪಾತ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬರುತ್ತಿದೆ. ನಿರಾಶ್ರಿತರಿಗೆ ಎ, ಬಿ, ಸಿ ಎಂದು ಪರಿಹಾರ ವಿತರಣೆಗೆ ಸರ್ವೇ ನಡೆಸುತ್ತಿದ್ದು, ಇದನ್ನು ಬಿಟ್ಟು ಎಲ್ಲರಿಗೂ ಸರಿಯಾಗಿ ಎ ಶ್ರೇಣಿಯಲ್ಲಿಯೇ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಾಂತ ಎಲ್ಲ ನಿರಾಶ್ರಿತರ ಜೊತೆಗೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಜಿಪಂ ಸದಸ್ಯ ಮಹಾಂತೇಶ ಉದಪುಡಿ, ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ, ದುಂಡಪ್ಪ ಲಿಂಗರಡ್ಡಿ, ಎಚ್.ಎ.ಕಡಪಟ್ಟಿ, ಧರೆಪ್ಪ ಸಾಂಗ್ಲೀಕರ, ರಾಜು ಹಲಗತ್ತಿ, ಸದಾಶಿವ ಮಾಳಿ ಸೇರಿದಂತೆ ಅನೇಕರು ಮುಖಂಡರು ಮಾತನಾಡಿದರು.
ಮುಧೋಳ ಬ್ಲಾಕ್ ಹಾಗೂ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂಜಯ ನಾಯಕ ಹಾಗೂ ಲೋಕಣ್ಣ ಕೊಪ್ಪದ ತಹಶೀಲ್ದಾರ್ ಸಂಜಯ ಇಂಗಳೆ ಆವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.