ಕೆ.ಆರ್.ನಗರ: ಕಲ್ಯಾಣಪುರ ಗ್ರಾಮದ ಅನೇಕ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಗ್ರಾಮದ ಕನಕ ಯುವ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಅರ್ಜುನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕನಕ ಯುವ ಬಳಗದ ಅಧ್ಯಕ್ಷ ಅಜಯ್ ಮಾತನಾಡಿ, ನಮ್ಮ ಗ್ರಾಮ ತಾಲೂಕು ಕೇಂದ್ರಕ್ಕೆ ಸಮೀಪದಲ್ಲಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ನಿರ್ವಹಣೆ ಇಲ್ಲದೆ ಕತ್ತಲಲ್ಲಿ ಬದುಕು ನಡೆಸುವಂತಾಗಿದೆ ಎಂದು ದೂರಿದರು.
ಗ್ರಾಮದ ರಸ್ತೆಗಳು ಕಲ್ಲು ಮಣ್ಣಿನಿಂದ ಕೂಡಿದ್ದು ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿಲ್ಲ. ರಸ್ತೆ ಬದಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯಿಂದ ಬರುವ ಮತ್ತು ಮನೆಗಳಿಂದ ಹೊರ ಬರುವ ನೀರು ರಸ್ತೆ ಮದ್ಯೆದಲ್ಲಿ ನಿಂತು ಕೊಳಚೆ ನಿರ್ಮಾಣವಾಗುತ್ತಿದೆ ಎಂದು ಕಿಡಿಕಾರಿದರು.
ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಆರೋಗ್ಯ ಹದಗೆಡುತ್ತಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾಗಿ ಎಲ್ಲರೂ ಪರಿತಪಿಸುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳು ತಲೆದೋರಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದರು. ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಗದ ಖಜಾಂಚಿ ಸುನೀಲ್, ಪದಾಧಿಕಾರಿಗಳಾದ ಅರುಣಾ, ಜೈಪಾಲ್, ಪಿಡಿಒ ರಾಘವೇಂದ್ರ ಮತ್ತಿತರರಿದ್ದರು.