ಅರಸೀಕೆರೆ: ಐತಿಹಾಸಿಕ ಹಿನ್ನೆಲೆಯುಳ್ಳ ಹೊಯ್ಸಳರ ಕಾಲದ ದೇವಾಲಯಗಳ ಜೀರ್ಣೋದ್ಧಾರವನ್ನು ಕೈಗೊಳ್ಳುವ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಹಾಗೂ ಶಿಲ್ಪ ಕಲೆಗಳನ್ನು ಸಂರಕ್ಷಣೆ ಮಾಡಬೇಕಾಗಿರುವ ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಾರನಹಳ್ಳಿ ಸೋಮೇಶ್ವರ ದೇವಾಲಯ ಒಳಗಾಗಿದೆ ಎಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಜಿ.ವಿ.ಟಿ. ಬಸವರಾಜು ತೀವ್ರ ಅಸಮಾದಾನ ವ್ಯಕ್ತಪಡಿಸಿದರು.
ತಾಲೂಕಿನ ಹಾರನಹಳ್ಳಿ ಸೋಮೇಶ್ವರ ದೇವಾಲಯವು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ದೇವಾಲಯ ಅತ್ಯಂತ ಶಿಥಿಲಾವಸ್ಥೆಗೆ ತಲುಪಿದ್ದು, ಸುತ್ತಮುತ್ತಿನ ಪರಿಸರದಲ್ಲಿ ಗಿಡಗೆಂಟೆ ಬೆಳೆದು ನಿಂತಿದ್ದು, ದೇವಾಲಯವು ಹಾಳು ಬಿದ್ದ ಕೊಂಪೆಯಂತಾಗಿದೆ ಎಂದು ವಿಷಾಧಿಸಿದರು.
ಬಿಜೆಪಿ ಸಂಘಟನೆ ಶ್ರಮದಾನ: ನಮ್ಮ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ದೇವಾಲಯದ ಆವರಣದಲ್ಲಿ ಬೆಳೆದಿದ್ದ ಗಿಡಗಂಟೆ ತೆರವುಗೊಳಿಸಲಿದ್ದಾರೆ ಎಂದರು. ನಂತರ ರಾಜ್ಯ ಪುರಾತತ್ವ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಅವರು ಮಾತನಾಡಿ ದೇವಾಲಯದ ಜೀರ್ಣೋದ್ಧಾರಕ್ಕೆ ಅಗತ್ಯ ಕ್ರಮ ಶೀಘ್ರವಾಗಿ ಕೈಗೊಳ್ಳುವಂತೆ ಆಗ್ರಹಿಸಿದರು.
ದೇವಾಲಯ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ನಗರ ಅಧ್ಯಕ್ಷ ಪುರುಷೋತ್ತಮ ಗ್ರಾಮಾಂತರ ಉಪಾಧ್ಯಕ್ಷರಾದ ಅಣ್ಣಾಯ್ಕನಹಳ್ಳಿ ವಿಜಯ ಕುಮಾರ್, ಕೆಂಪುಸಾಗರ ಶಿವರಾಜ್ ರೈತ ಮೋರ್ಚಾ ಅಧ್ಯಕ್ಷ ಯತೀಶ್ ,ಅಶೋಕ್, ದಯಾನಂದ್, ರವಿಕುಮಾರ್ ಬಾಬಣ್ಣ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಪಾಲಾಕ್ಷ, ಶಿರಸ್ತೇದಾರ್ ಸೋಮಶೆಖರ್, ಮುಜರಾಯಿ ಇಲಾಖೆ ಅಧಿಕಾರಿಗಳಾದ ನಾಗರಾಜು ಹಾಜರಿದ್ದರು.