ಮಂಡ್ಯ: ಖಾಯಂ ಭತ್ತ ಖರೀದಿ ಕೇಂದ್ರ ಸ್ಥಾಪನೆ, ಸಕ್ಕರೆ ಕಾರ್ಖಾನೆ ಗಳ ಪ್ರಾರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಯುವಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಎದುರು ಜಮಾಯಿಸಿದ ರೈತಸಂಘದ ಕಾರ್ಯಕರ್ತರು ಭತ್ತಕ್ಕೆ ಬೆಂಬಲ ಬೆಲೆ ಘೋಷಿಸದ, ಖರೀದಿ ಕೇಂದ್ರ ತೆರೆಯದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ತಕ್ಷಣವೇ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟ ದಲ್ಲಿ ಖಾಯಂ ಆಗಿ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಭತ್ತ ಈಗ ಕಟಾವಿನ ಹಂತ ತಲುಪಿದೆ. ಇನ್ನೂ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿಲ್ಲ, ಖರೀದಿ ಕೇಂದ್ರ ತೆರೆಯುವುದಕ್ಕೆ ಆಸಕ್ತಿ ವಹಿಸಿಲ್ಲ. ಸರ್ಕಾರ ನಿರ್ಲಕ್ಷ್ಯ ವಹಿಸಿದಲ್ಲಿ ರೈತರು ಬೆಳೆದಿರುವ ಭತ್ತ ದಲ್ಲಾಳಿಗಳ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಬ್ಬು ಸರಬರಾಜು ಮಾಡಿ: ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬನ್ನು ಸರ್ಕಾರ ಸಾಗಾಣಿಕೆ ಬೇರೆ ಕಾರ್ಖಾನೆ ಗಳಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು. ಮೈಷುಗರ್ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಮುಂದಿನ ಹಂಗಾಮಿನ ಒಳಗೆ ಪ್ರಾರಂಭಿಸಿ ಆಯಾ ಭಾಗದ ಕಬ್ಬು ಬೆಳೆಗಾರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಗಣಿಗಾರಿಕೆ ನಿಲ್ಲಿಸಿ: ಕೆ.ಆರ್.ಎಸ್ ಸುತ್ತ ಮುತ್ತಲಿನ 20 ಕಿ.ಮೀ. ವ್ಯಾಪ್ತಿ ಪ್ರದೇಶದ ಒಳಗೆ ಗಣಿಗಾರಿಕೆ ಶಾಶ್ವತವಾಗಿ ನಿಲ್ಲಿಸಬೇಕು. ಅಕ್ರಮವಾಗಿ ನಡೆಸುತ್ತಿರುವ ಗಣಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಮಟ್ಟದಲ್ಲಿ ಕೇಂದ್ರ: ಜಿಲ್ಲಾಧ್ಯಕ್ಷ ಶಂಭೂನ ಹಳ್ಳಿ ಸುರೇಶ್ ಮಾತನಾಡಿ, ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಸ್ವತಃ ಭತ್ತ ನಾಟಿ ಮಾಡುವ ಮೂಲಕ ರೈತರು ಕಬ್ಬು ಬೆಳೆ ಬಿಟ್ಟು ಭತ್ತ ಸೇರಿ ದಂತೆ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೇರೇಪಿಸಿದರು. ರೈತರ ಸಾಲ ಮನ್ನಾ ಮಾಡುವುದಾಗಿ ಸಮ್ಮಿಶ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಕುಮಾರ ಸ್ವಾಮಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿದರೂ ರೈತರ ಸಾಲಮನ್ನಾ ಆಗಲಿಲ್ಲ. ಜೊತೆಗೆ ರೈತರಿಗೆ ಹೊಸದಾಗಿ ಬೆಳೆ ಸಾಲವೂ ದೊರೆಯುತ್ತಿಲ್ಲ.
ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಪ್ರತಿಭಟನೆಯಲ್ಲಿ ಬೊಮ್ಮೇ ಗೌಡ, ರಾಜೇಗೌಡ, ಲತಾ ಶಂಕರ್, ರಾಮಕೃಷ್ಣಯ್ಯ, ನಾಗರಾಜು, ಚಂದ್ರು, ಲಿಂಗಪ್ಪಾಜಿ, ಶಂಕರ್, ಸುತ್ತಮುತ್ತಲ ರೈತರು ಭಾಗವಹಿಸಿದ್ದರು.