ಕಾರಟಗಿ: ಭತ್ತ ಖರೀದಿ ಕೇಂದ್ರ ಹಾಗೂ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಗೇಟ್ ಬಳಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು, ಭತ್ತ ಖರೀದಿ ಕೇಂದ್ರ ಆರಂಭಿಸದೇ ನಿರ್ಲಕ್ಷ್ಯ ತೋರಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ರಾಜ್ಯ ಹೆದ್ದಾರಿ ಮೂಲಕ ಕನಕದಾಸ ವೃತ್ತ ತಲುಪಿದರು. ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಹೆದ್ದಾರಿಯಲ್ಲಿ ಭತ್ತ ಸುರಿದು ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದ ಪ್ರಮುಖರು ಮಾತನಾಡಿ, ಭತ್ತವನ್ನು ರೈತರು ಬೆಳೆದರೆ ಅದಕ್ಕೆ ಬೆಲೆ ನಿಗದಿಪಡಿಸುವುದು ದಲ್ಲಾಳಿಗಳು. ಇನ್ನು ಅಡ್ಡಾದಿಡ್ಡಿ ದರಕ್ಕೆ ಭತ್ತ ಖರೀದಿಸುವುದರಿಂದ ರೈತರ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ಉದ್ಭವಿಸಿದೆ. ಅಕಾಲಿಕ ಮಳೆ ಹಾಗೂ ಇನ್ನಿತರ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಭತ್ತದ ಕೃಷಿ ನಷ್ಟದತ್ತ ಸಾಗುತ್ತಿದೆ. ಅಲ್ಲದೇ ಭತ್ತದ ಬೆಳೆ ಕಟಾವಿಗೆ ಮುನ್ನ 30ರಿಂದ 35 ಸಾವಿರ ರೂ. ಪ್ರತಿ ಎಕರೆಗೆ ಖರ್ಚಾಗುತ್ತಿದ್ದು, ಕಟಾವಿನ ಬಳಿಕ ಭತ್ತಕ್ಕೆ ಸೂಕ್ತ ಬೆಲೆ ಲಭಿಸುತ್ತಿಲ್ಲ. ಈ ವರ್ಷ ಕೂಡ ರೈತರು ಸಂಕಷ್ಟಕ್ಕೆ ಸಿಲುಕಿ ನರಳಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಖುದ್ದು ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ 10 ದಿನಗಳಿಂದ ರಾಜ್ಯ ಹೆದ್ದಾರಿಯಲ್ಲಿ ಉಪವಾಸ ಕುಳಿತು ಪ್ರತಿಭಟಿಸಿದರು ಬೇಡಿಕೆ ಈಡೇರಿಲ್ಲ. ಈ ಬಗ್ಗೆ ಕ್ಷೇತ್ರದ ಶಾಸಕರಾಗಲಿ, ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಸರ್ಕಾರದ ಮೇಲೆ ಒತ್ತಡ ಹೇರಿ ಭತ್ತ ಖರೀದಿ ಕೇಂದ್ರ ತೆರೆಸುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಸ್ವಾಮಿನಾಥನ್ ಆಯೋಗದ ವರದಿಯಂತೆ ಭತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು.
ಈಗಾಗಲೇ ತೆಲಂಗಾಣ, ಆಂಧ್ರ ಮತ್ತು ಕೇರಳ ರಾಜ್ಯ ಸರ್ಕಾರಗಳು ಕನಿಷ್ಟ 2500ರಿಂದ 2700 ರೂ.ಗೆ ಭತ್ತ ಖರೀದಿಸುತ್ತಿವೆ. ಆ ಮಾದರಿಯಲ್ಲಿಯೇ ಭತ್ತ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಬೇಕು. ಜಿಲ್ಲೆಯ ಸಂಸದರು, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ರೈತರ ನೆರವಿಗೆ ಬರಬೇಕು. ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಮುಂದಾಗುವ ಅನಾಹುತಕ್ಕೆ ತಾವೇ ಹೊಣೆಗಾರರು. ಸಂಬಂಧಿಸಿದವರು ಕೂಡಲೇ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರತೆ ಪಡೆಯಲಿದೆ ಎಂದು ಎಚ್ಚರಿಸಿದರು.
ಕೆಲವೇ ಸಮಯದಲ್ಲಿ ಪ್ರತಿಭಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲ್ಲಶೆಟ್ಟಿ ಆಗಮಿಸಿ, ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ, ತಾಲೂಕಾಧ್ಯಕ್ಷ ನಾರಾಯಣ ಈಡಿಗೇರ್, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ರೈತ ಹೋರಾಟಗಾರರು ಉಪಸ್ಥಿತರಿದ್ದರು.