ನಿಡಗುಂದಿ: ಪಟ್ಟಣದ ಬಸ್ ನಿಲ್ದಾಣದ ಬಳಿಯ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸದಂತೆ ಆಗ್ರಹಿಸಿ ವ್ಯಾಪಾರಸ್ಥರು ಹಾಗೂ ನಾಗರಿಕರು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಚತುಷ್ಪಥ ಹತ್ತಿರ ಅನೇಕ ವರ್ಷಗಳಿಂದ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ವಿಜಯಪುರ-ಹುನಗುಂದ ಟೋಲ್‌ಪ್ರೈ.ಲಿ.ನವರು ನಮ್ಮ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ಅಂಗಡಿಗಳನ್ನು ತೆರವುಗೊಳಿಸಿದರೆ ನಮ್ಮ ಬದುಕು ಬೀದಿ ಪಾಲಾಗುತ್ತದೆ ಎಂದು ಮನವಿ ಮಾಡಿಕೊಂಡರು.
ಲಾಕ್‌ಡೌನ್‌ದಿಂದ ನಮ್ಮ ಬದುಕು ಮತ್ತಷ್ಟೂ ದುಸ್ತರವಾಗಿದೆ. ವ್ಯಾಪಾರ ಸಾಕಷ್ಟು ಕಡಿಮೆಯಾಗಿದ್ದು ಜೀವನ ನಿರ್ವಹಣೆಗೆ ಸಂಕಷ್ಟ ಅನುಭವಿಸುತ್ತಿದ್ದೇವೆ. ಬೀದಿ ಬದಿ ವ್ಯಾಪಾರಸ್ಥರೆಲ್ಲರಿಗೂ ಪರ್ಯಾಯ ವ್ಯವಸ್ಥೆಯಾಗುವವರಿಗೆ ಅಂಗಡಿಗಳನ್ನು ತೆರವುಗೊಳಿಸದೇ ಪ್ರಸ್ತುತ ಸ್ಥಳಗಳಲ್ಲೇ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೆಲ ಸಣ್ಣಪುಟ್ಟ ಅತಿಕ್ರಮಣವಾಗಿದ್ದರೂ ಹೆದ್ದಾರಿಗೆ ಯಾವುದೇ ಅಡೆ ತಡೆಯಾಗದಂತೆ ಎಚ್ಚರಿಕೆಯಿಂದ ವ್ಯಾಪಾರ ನಡೆಸುತ್ತಿದ್ದೇವೆ.
ತಮ್ಮ ಸಹಕಾರದಿಂದ ಕಳೆದ ಹಲವಾರು ವರ್ಷಗಳಿಂದ ಇದೇ ಜಾಗೆಯಲ್ಲಿ ಸಾಲ ಮಾಡಿ ಬದುಕು ಕಟ್ಟಿಕೊಳ್ಳಲಾಗಿದೆ. ಆದರೆ, ಸದ್ಯ ನಮ್ಮ ಸರಹದ್ದನ್ನು ಖಾಲಿ ಮಾಡಿ ಎಂದರೆ, ನಮ್ಮ ಬದುಕು ಬೀದಿಗೆ ಬಂದು ನಿಲ್ಲುವ ಜತೆಗೆ ಸಾಲದ ಸೂಲ ಹೆಚ್ಚಾಗುತ್ತದೆ. ಹಿಂದೆ ನೀಡಿದ ಸಹಕಾರವನ್ನು ಮುಂದೆಯೂ ನೀಡುವಂತೆ ಟೋಲ್ ಪ್ರೈ ಲಿ.ನವರಲ್ಲಿ ಒತ್ತಾಯಿಸುವ ಜತೆಗೆ ಸರ್ಕಾರ ಕೂಡಾ ಜನರ ಹಿತ ಕಾಯುವಲ್ಲಿ ಮುಂದಾಗುವಂತೆ ಮನವಿ ಮಾಡಿದರು.
ಪಪಂ ಮಾಜಿ ಅಧ್ಯಕ್ಷ ಸಂಗಮೇಶ ಬಳಿಗಾರ, ಬಿಜೆಪಿ ಮುಖಂಡ ಪ್ರಹ್ಲಾದ ಪತ್ತಾರ, ಶಿವಾನಂದ ಮುಚ್ಚಂಡಿ,ಶೇಖರ ದೊಡಮನಿ, ಆನಂದ ಭೋವಿವಡ್ಡರ, ಸಂತೋಷ ಕಡಿ, ಶೇಖರ ರೂಢಗಿ, ಬಸವರಾಜ ಜಂಡೇದ, ಸಿಂಧೂರ ಭೈರವಾಡಗಿ, ರಾಜು ಹೊಸೂರ, ಹುಸೇನಸಾಬ ಸಾಲಿಮನಿ, ಮಲೀಕಸಾಬ ಬಾಗೇವಾಡಿ, ರಾಜು ಹಾದಿಮನಿ ಸೇರಿದಂತೆ ಅನೇಕ ಬೀದಿ ವ್ಯಾಪಾರಿಗಳಿದ್ದರು.