ಹರಪನಹಳ್ಳಿ: ರಂಜಾನ್ ಹಬ್ಬ ಆಚರಣೆ ವೇಳೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಸಿಪಿಐ ಡಿ.ದುರುಗಪ್ಪ ಮನವಿ ಮಾಡಿದರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರಂಜಾನ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ರಂಜಾನ್ ಹಬ್ಬದ ದಿನದಂದು ಅಹಿತರ ಘಟನೆಗಳು ಸಂಘವಿಸದಂತೆ ಪ್ರತಿಯೊಬ್ಬರು ಸಹಕರಿಸಬೇಕು. ಹಲವು ಸೂಕ್ಷ್ಮ ಸನ್ನಿವೇಶಗಳು ಇರುವುದರಿಂದ ನಾಗರಿಕರ ಹಿತ ಕಾಪಾಡುವುದು ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆ ಹೊಣೆ ನಮ್ಮ ಮೇಲಿದೆ. ಈ ಹಿಂದಿನಿಂದ ನಡೆದು ಬಂದಂತೆ ಸೌಹಾರ್ದಯುತವಾಗಿ ರಂಜಾನ್ ಆಚರಿಸುವಂತೆ ಹೇಳಿದರು.
ಅಂಜುಮನ್ ಸಮಿತಿ ಅಧ್ಯಕ್ಷ ಸಿ.ಜಾವೀದ್ ಮಾತನಾಡಿ, ಈದ್ಗಾ ಮೈದಾನದಲ್ಲಿ ನಡೆಯುವ ಪ್ರಾರ್ಥನೆಗೆ ಬರುವವರ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನಗಳನ್ನು ನಿಲುಗಡೆ ವ್ಯವಸ್ಥೆ ಮಾಡಬೇಕು. ಸಮುದಾಯದ ಬಡವರು ಕೂಲಿ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಬರುವುದರಿಂದ ಪಟ್ಟಣದ ಅಂಗಡಿ ಮುಗ್ಗಟ್ಟುಗಳನ್ನು ರಾತ್ರಿ 11 ಗಂಟೆವರೆಗೆ ತೆರೆಯುವಂತೆ ಅವಕಾಶ ಕಲ್ಪಿಸಿದರೆ ಖರೀದಿಗೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಡಿ.ಅಬ್ದುಲ್ ರಹಿಮಾನಸಾಬ್ ಮಾತನಾಡಿ, 4 ಕಡೆಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. 30 ದಿನಗಳ ಕಾಲ ಉಪವಾಸವಿದ್ದು, ದೇಹ ದಂಡಿಸಿರುತ್ತಾರೆ. ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಸಹೋದರಂತೆ ಇರುವುದರಿಂದ ಶಾಂತಿಯುವಾಗಿ ಹಬ್ಬ ಆಚರಿಸುತ್ತೇವೆ. ಸಭೆಗೆ ಕೇವಲ ಮುಸ್ಲಿಂ ಮುಖಂಡರನ್ನು ಆಹ್ವಾನಿಸುವ ಬದಲು ಎಲ್ಲಾ ಸಮುದಾದವರನ್ನು ಆಹ್ವಾನಿಸಬೇಕಿತ್ತು ಎಂದರು.
ಪಿಎಸ್‌ಐ ರಾಜೇಂದ್ರನಾಯ್ಕ ಮಾತನಾಡಿ, ಜನರು ಕೆಲಸಕ್ಕೆ ಹೋಗಿ ತಡವಾಗಿ ಬರುವುದರಿಂದ ಬಟ್ಟೆ, ಅಗತ್ಯ ಸಾಮಾನು ಖರೀದಿಸಲು ರಸ್ತೆ ಬದಿ ಅಂಗಡಿ ಮುಗ್ಗಟ್ಟು ಹಾಕಿಕೊಳ್ಳಲು ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ವಕೀಲ ಟಿ.ವೆಂಕಟೇಶ್, ಅಲ್ಮರಸೀಕೆರೆ ರಾಜಣ್ಣ, ರಾಜಪ್ಪ ಮಾತನಾಡಿದರು. ಜಾಫರ್‌ಸಾಭ್, ಆರ್.ವಾಗೀಶ್, ಗಣೇಶ್, ಭಂಗಿ ಕೆಂಚಪ್ಪ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.