Advertisement

ಬರಪೀಡಿತ ಪಟ್ಟಿಯಲ್ಲಿ ಶಿಡ್ಲಘಟ್ಟ ಸೇರಿಸಲು ಆಗ್ರಹ

04:16 PM Feb 15, 2020 | Suhan S |

ಶಿಡ್ಲಘಟ್ಟ: ಸತತ ಬರಗಾಲದಿಂದ ತತ್ತರಿಸುತ್ತಿರುವ ಶಿಡ್ಲಘಟ್ಟ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಶಾಸಕ ವಿ. ಮುನಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಬರಪೀಡಿತ ಪಟ್ಟಿಯಲ್ಲಿ ಶಿಡ್ಲಘಟ್ಟ ತಾಲೂಕು ಸೇರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ  ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದಅವರು ಮಾತನಾಡಿದರು.

ನೀರಿನ ಕೊರತೆ: ಈ ವರ್ಷ ವಾಡಿಕೆಯಷ್ಟು ಪ್ರಮಾಣದಲ್ಲಿ ಮುಂಗಾರು ಮಳೆ ಬಿದ್ದಿದೆಯಾದರೂ ಸಕಾಲಕ್ಕೆ ಮಳೆ ಬೀಳಲಿಲ್ಲ. ಇದರಿಂದ ಉತ್ತಿ ಬಿತ್ತಿದ ಪ್ರಮಾಣವೂ ಕಡಿಮೆ ಹಾಗೂ ಬಿತ್ತಿದ ಬೆಳೆಯೂ ಕೈಗೆ ಸಿಗಲಿಲ್ಲ. ಕೆರೆ ಕುಂಟೆಗಳಲ್ಲಿ ನೀರಿಲ್ಲ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಡ್ಲಘಟ್ಟ ಸೇರಿಸಲು ಒತ್ತಾಯ: ಸರ್ಕಾರ ಈಗಾಗಲೇ ಬರಪೀಡಿತ ಪ್ರದೇಶ ಮತ್ತು ತಾಲೂಕುಗಳ ಪಟ್ಟಿ ಸಿದ್ಧಪಡಿಸಿದ್ದು, ಅದರಲ್ಲಿ ಶಿಡ್ಲಘಟ್ಟ ತಾಲೂಕು ಹೆಸರು ಬಿಟ್ಟಿರುವುದು ಅಚ್ಚರಿ ಉಂಟು ಮಾಡಿದೆ. ಯಾವುದೇ ನದಿನಾಲೆಗಳಿಲ್ಲದೇ ಬರಗಾಲದಿಂದ ತಾಲೂಕಿನ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಂದಿನ ಅಧಿವೇಶನದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಶಿಡ್ಲಘಟ್ಟ ಸೇರಿಸಲು ಸರ್ಕಾರವನ್ನು ಆಗ್ರಹಿಸಿ ಬರಪೀಡಿತ ತಾಲೂಕುಗಳಿಗೆ ಸಿಗುವ ಎಲ್ಲಾ ಪರಿಹಾರದ ಸವಲತ್ತುಗಳು ಸಿಗುವಂತೆ ಮಾಡಲಾಗುವುದು ಎಂದರು.

ಮುನ್ನೆಚ್ಚರಿಕೆ ಕ್ರಮ: ಕುಡಿಯುವ ನೀರಿನ ಸಮಸ್ಯೆಬಗೆಹರಿಸುವ ವಿಚಾರದಲ್ಲಿ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆ, ಬೆಸ್ಕಾಂ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಜನಸೇವೆ ಮಾಡಬೇಕೆಂದು ಸೂಚಿಸಿದ ಶಾಸಕರು, ಬೇಸಿಗೆಯಲ್ಲಿ ತೊಂದರೆ ಆಗದಂತೆ ಎಚ್ಚೆತ್ತುಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದರು.

Advertisement

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್‌.ವಿ.ಮಂಜುನಾಥ್‌ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ರೈತರಿಗೆ ಸಕಾಲದಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ತೊಂದರೆಯಾಗುತ್ತಿದ್ದು, ಕೂಡಲೇ ಸಿಬ್ಬಂದಿ ನೇಮಕ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕರು ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಅಗತ್ಯಸಿಬ್ಬಂದಿ ನೇಮಕ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ತಾಪಂ ಇಒ ಶಿವಕುಮಾರ್‌, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ವಿನೋದ್‌, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಸಿಡಿಪಿಒ ನಾಗವೇಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅನುಸೂಯ , ಬಿಇಒ ಶ್ರೀನಿವಾಸ್‌, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next