Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

04:23 PM Oct 04, 2020 | Suhan S |

ಬಸವನಬಾಗೇವಾಡಿ: ಸಿಂಧೋಳ್ಳು ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು ಹಾಗೂ ತಾಲೂಕಿನ ರೈತರ ಹತ್ತಾರು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿ ತಾಲೂಕು ಸಿಂಧೋಳ್ಳು ಸಮಾಜ ಹಾಗೂ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದವರು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಶನಿವಾರ ಪಟ್ಟಣದ ಬಸವೇಶ್ವರ ದೇವಸ್ಥಾನದ ಬಳಿ ಜಮಾಯಿಸಿದ ತಾಲೂಕು ಸಿಂಧೋಳ್ಳು ಸಮಾಜ ಹಾಗೂ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಸಿಂಧೋಳ್ಳು (ದುರಗ ಮುರಗಿ) ಸಮಾಜ ಜನರು ತಮ್ಮ ದೇವತೆಯ ಗುಡಿಯನ್ನು ತಲೆ ಮೇಲೆ ಇಟ್ಟುಕೊಂಡು ತಮ್ಮ ವೇಷ ಭೂಷಣದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷೆವಾಗಿತ್ತು. ನಂತರ ಬಸವೇಶ್ವರ ವೃತ್ತದಲ್ಲಿ ಸಿಂಧೋಳ್ಳು ಸಮಾಜದ ಹೆಣ್ಣು ಮಕ್ಕಳು ಡೋಲು ಬಡಿದರೆ, ಗಂಡು ಮಕ್ಕಳು ಬಾರಕೋಲದಿಂದ ಮೈಗೆ ಹೊಡೆದುಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪೋತರಾಜ ವೇಷ ಧರಿಸಿ ದುರ್ಗಾದೇವಿ ಗುಡಿ ಹೊತ್ತುಕೊಂಡು ಮೆರವಣಿಗೆಯುದ್ದಕ್ಕೂ ದುರಗ ಮುರಗಿ ಸಂಪ್ರದಾಯದಂತೆ ಆಟವಾಡುತ್ತ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ತಾಳಿಕೋಟೆ ರಸ್ತೆಯ ಮಿನಿ ವಿಧಾನಸೌಧಕ್ಕೆ ತೆರಳಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಸಿದ್ದರಾಮ ರಂಜಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಸಿಂಧೋಳ್ಳು ಸಮುದಾಯಕ್ಕೆಜಾತಿ ಪ್ರಮಾಣ ಪತ್ರ ಒದಗಿಸಿ ಸಿಂಧೋಳ್ಳು ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಾಗೂ ಸರಕಾರದ ಸೌಲಭ್ಯ ಪಡೆದುಕೊಳ್ಳಲು ಅನುಕೂಲ ಕಲ್ಪಿಸಬೇಕು. ರೈತರಿಗೆ ಮಾರಕವಾಗಿರುವ ಭೂ ಸ್ವಾಧಿಧೀನ ಕಾಯ್ದೆ ಹಿಂಪಡೆಯಬೇಕು. ಎಪಿಎಂಸಿಮತ್ತು ವಿದ್ಯುತ್‌ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ರಾಜ್ಯಾದ್ಯಂತ ರೈತರ ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಇತ್ಯರ್ಥ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ಮನವಿ ಪತ್ರವನ್ನು ತಹಶೀಲ್ದಾರ್‌ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಲೂಕಾಧ್ಯಕ್ಷ ಸಿದ್ಧರಾಮ ಅಂಗಡಗೇರಿ, ಈರಣ್ಣ ದೇವರಗುಡಿ, ಸೋಮನಗೌಡ ಪಾಟೀಲ, ಚಂದ್ರಾಮ ತೆಗ್ಗಿ, ಮಾಚಪ್ಪ ಹೊರ್ತಿ, ಹೊನಕೇರಪ್ಪ ತೆಲಗಿ, ರಾಚಪ್ಪ ಬೀಳಗಿ, ರಾಮಣ್ಣ ವಾಲೀಕಾರ, ಚನ್ನಬಸಪ್ಪ ಸಿಂಧೂರ, ರಾಜೇಸಾಬ ವಾಲೀಕಾರ, ಮುತ್ತಪ್ಪ ಸಿಂಧೋಳ್ಳು, ಮಾರುತಿಸಿಂಧೋಳ್ಳು, ಯಲ್ಲಪ್ಪ ಸಿಂಧೋಳ್ಳು, ಮಾಣಪ್ಪ ಸಿಂಧೋಳ್ಳು, ಕಾಟೆಪ್ಪ ಸಿಂಧೋಳ್ಳು, ದುರಗವ್ವ ಸಿಂಧೋಳ್ಳು, ಜಂಬಕ್ಕ ಸಿಂಧೋಳ್ಳು, ಯಲ್ಲವ್ವ ಸಿಂಧೋಳ್ಳು, ಪೆಂಟವ್ವ ಸಿಂಧೋಳ್ಳು, ಲಕ್ಷ್ಮೀಬಾಯಿ ಸಿಂಧೋಳ್ಳು, ಮಂಜುಳಾ ಸಿಂಧೋಳ್ಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next