ಕೋಲಾರ: ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ರೈತ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಗೆ ಮನವಿ ಸಲ್ಲಿಸಿದರು.
ಸೇನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ವೈ.ಗಣೇಶ್‌ಗೌಡ ಮಾತನಾಡಿ, ಎಸ್‌ಎನ್‌ಆರ್ ಆಸ್ಪತ್ರೆಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ರೋಗಿಗಳು ಬರುತ್ತಾರೆ. ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಸಿಬ್ಬಂದಿ ಕೊರತೆ: ಡಯಾಲಿಸಿಸ್ ಸಿಟಿ ಸ್ಕ್ಯಾನ್, ಎಂಆರ್‌ಐ, ಎಕ್ಸ್‌ರೇ ಸೌಕರ್ಯ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲದಂತೆ ನೂತನ ರೀತಿಯ ತಂತ್ರಜ್ಞಾನವುಳ್ಳ ಯಂತ್ರಗಳನ್ನು ಅಳವಡಿಸಲಾಗಿದೆ. ಸಿಬ್ಬಂದಿಯ ಕೊರತೆಯಿಂದ ರೋಗಿಗಳು ಹೊರಗಡೆಗೆ ಹೋಗುತ್ತಿದ್ದಾರೆ ಎಂದು ಹೇಳಿದರು.
ನೀರಿನ ಸಮಸ್ಯೆ: ನೀರಿನ ಕೊರತೆಯಿಂದ ಡಯಾಲಿಸಿಸ್ ಮಾಡಲು ಸಾಧ್ಯವಾಗುತ್ತಿಲ್ಲ. ರೋಗಿಗಳು ಸಹ ಹೊರಗಿನಿಂದ ಕ್ಯಾನ್‌ನಲ್ಲಿ ತೆಗೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿದೆ. ಆಸ್ಪತ್ರೆ ಪಕ್ಕದಲ್ಲೇ ಇರುವ ಪ್ರವಾಸಿ ಮಂದಿರದ ಆವರಣದಲ್ಲಿನ ಕೊಳವೆಬಾವಿಯಲ್ಲಿ ನೀರು ಉತ್ತಮವಾಗಿದ್ದು, ಅಲ್ಲಿಂದ ಪೈಪ್‌ಲೈನ್ ಮೂಲಕ ಸಂಪರ್ಕ ಪಡೆದುಕೊಂಡರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಹಿಂದೆ ಆಸ್ಪತ್ರೆಗೆ ಸರಬರಾಜು ಮಾಡಿರುವ ಫ್ಯಾನ್‌ಗಳು ಕಳಪೆಯಿಂದ ಕೂಡಿದ್ದು, ಕಲವೇ ದಿನಗಳಿಗೆ ರಿಪೇರಿಯಾಗಿವೆ. ಈಗ ರೋಗಿಗಳು ಆಸ್ಪತ್ರೆಗೆ ಬರುವಾಗ ಫ್ಯಾನ್ ತೆಗೆದುಕೊಂಡು ಬರುತ್ತಿದ್ದಾರೆ. ಕಳಪೆ ಗುಣಮಟ್ಟದ ಫ್ಯಾನ್ ಸರಬರಾಜು ಮಾಡಿರುವ ಗುತ್ತಿಗೆದಾರನಿಂದ ಗುಣಮಟ್ಟದ ಫ್ಯಾನ್ ತೆರಿಸಬೇಕು ಎಂದು ಒತ್ತಾಯಿಸಿದರು.ನಿಯೋಗದಲ್ಲಿ ಸೇನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬೈಚೇಗೌಡ, ಪದಾಧಿಕಾರಿಗಳಾದ ತ್ಯಾಗರಾಜ್ ಹಾಜರಿದ್ದರು.