Advertisement

ಅವ್ಯವಹಾರ ಮಾಹಿತಿ ಹೊರ ಹಾಕಲು ಆಗ್ರಹ

01:31 PM Aug 20, 2019 | Team Udayavani |

ಕುಮಟಾ: ತಾಲೂಕಿನ ಬರಗದ್ದೆ ಸೊಸೈಟಿ ಕೋಟ್ಯಂತರ ರೂ. ಅವ್ಯವಹಾರದ ಮಾಹಿತಿ ಹೊರಹಾಕಬೇಕು ಮತ್ತು ರೈತರ ಹೆಸರಿನಲ್ಲಿದ್ದ ಸಾಲದ ಮೊತ್ತವನ್ನು ಶೀಘ್ರ ರೈತರಿಗೆ ತಲುಪಿಸಬೇಕು ಎಂದು ಒತ್ತಾಯಿಸಿ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದ ಸದಸ್ಯರು ಹಾಗೂ ಬೆಳೆ ಸಾಲ ಪಡೆದ ರೈತರು ಕುಮಟಾ ಕೆಡಿಸಿಸಿ ಬ್ಯಾಂಕ್‌ಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾದ ಪ್ರಯೋಜನ ರೈತರಿಗೆ ಇನ್ನೂ ದೊರೆತಿಲ್ಲ. ಕಳೆದ ಮೂರು ವರ್ಷಗಳಿಂದ ರೈತರಿಗೆ ಬೆಳೆ ಸಾಲ ಸಿಗಲಿಲ್ಲ. ಅಲ್ಲದೇ, ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಈತನ ಸಂಶಯಾಸ್ಪದ ನಡೆತೆ ಕುರಿತು ಮತ್ತು ಸಂಘದ ಕಾರ್ಯ ವೈಖರಿ ಬಗ್ಗೆ ಆರೋಪಿಸಿದ ರೈತರು, ಬ್ಯಾಂಕ್‌ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ 50,000 ರೂ. ಸಾಲಮನ್ನಾ ಸರ್ಕಾರ ಸಂಪೂರ್ಣವಾಗಿ ನೀಡಿದೆ. ಆದರೆ ಬರಗದ್ದೆ ಸೇವಾ ಸಹಕಾರಿ ಸಂಘ ಇನ್ನೂ ತನ್ನ ಸದಸ್ಯರ ಖಾತೆಗೆ ಹಣ ಜಮಾ ಮಾಡಿಲ್ಲ. ಅಲ್ಲದೆ ರೈತರಿಗೆ ಸಾಲ ಚುಕ್ತಾ ಪ್ರಮಾಣ ಪತ್ರವನ್ನೂ ನೀಡಿಲ್ಲ. ಕೆಡಿಸಿಸಿ ಬ್ಯಾಂಕ್‌ ಕುಮಟಾ ಶಾಖೆ ಸಿಬ್ಬಂದಿ ಹಾಗೂ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಇಲ್ಲಿನ 200ಕ್ಕೂ ಅಧಿಕ ರೈತರಿಗೆ ವಿತ್‌ಡ್ರಾವಲ್ ಚೆಕ್ಕಿಗೆ ಮೊತ್ತ ನಮೂದಿಸಿದೇ ಮನೆಮನೆಗೆ ತೆರಳಿ ಸಹಿ ಪಡೆದುಕೊಂಡಿದ್ದಾರೆ. ಕಾನೂನಾತ್ಮಕವಾಗಿ ಇಂತಹ ಚೆಕ್ಕನ್ನು ಬ್ಯಾಂಕಿಗೆ ತೆರಳಿ ಅಲ್ಲಿಯೇ ಬರೆದು ಕೊಟ್ಟು ಹಣ ಪಡೆಯಬೇಕಾಗುತ್ತದೆ. ಆದರೆ ನಿಯಮ ಉಲ್ಲಂಘಿಸಿ ಬ್ಯಾಂಕ್‌ ಸಹಕಾರಿ ಸಂಘದ ಕಾರ್ಯದರ್ಶಿ ಮೂಲಕ ಸಹಿ ಪಡೆದುಕೊಂಡಿರುವುದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಸೇವಾ ಸಹಕಾರಿ ಸಂಘದ ಕಾರ್ಯವೈಖರಿ ಬಗ್ಗೆ ರೈತರು ಸಂಶಯ ವ್ಯಕ್ತ ಪಡಿಸಿದರಲ್ಲದೇ, ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯನ್ನೂ ವ್ಯಕ್ತಪಡಿಸಿದರು.

ಈ ಹಿಂದೆ ಸಿಎಂ ಕುಮಾರಸ್ವಾಮಿಯವರ ರಾಜ್ಯ ಸರ್ಕಾರ ರೈತರ 1 ಲಕ್ಷದ ವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ ಸಂಘದ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಇದೇ ಸಂದರ್ಭದಲ್ಲಿ 35 ರಿಂದ 41 ಸಾವಿರ ರೂ. ಸಾಲ ಪಡೆದ ರೈತರ ಖಾತೆಗೂ 1 ಲಕ್ಷ ರೂ. ಸಾಲಮನ್ನಾ ಮಾಡಿಸಿ ಅಕ್ರಮ ಎಸಗಿದ್ದಾರೆ. ಅದಲ್ಲದೇ, ಕೆಲವರ ವಿತ್‌ಡ್ರಾವಲ್ ಚೆಕ್ಕಿನ ಮೊತ್ತವನ್ನೂ ಡ್ರಾ ಮಾಡಿದ್ದಾರೆ. ಆದರೆ ರೈತರಿಗೆ ಯಾವ ಮೊತ್ತವನ್ನೂ ನಿಡಿಲ್ಲ ಎಂದು ರೈತರು ತೀವ್ರ ವಾಗ್ಧಾಳಿ ನಡೆಸಿದರಲ್ಲದೇ, ಕಾರ್ಯದರ್ಶಿ ಬರುವ ತನಕ ನಾವು ಬ್ಯಾಂಕಿನಿಂದ ಕದಲುವುದಿಲ್ಲ ಎಂದು 200ಕ್ಕೂ ಅಧಿಕ ರೈತರು ಪಟ್ಟು ಹಿಡಿದರು.

ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಶ್ರೀಧರ ಭಾಗ್ವತ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರನ್ನು ಸಂತೈಸಲು ಪ್ರಯತ್ನಿಸಿದರು. ಆದರೆ ಈ ಹಿಂದೆಯೇ ಸೊಸೈಟಿ ಹಾಗೂ ಶಾಸಕರ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ರೈತರ ಹಣ ವಾಪಸ್ಸು ನೀಡುವುದಾಗಿ ತಿಳಿಸಿತ್ತು. ಆದಾಗ್ಯೂ ಹಣ ನೀಡದೇ ಲಕ್ಷ್ಮಣ ಪಟಗಾರ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಫೋನ್‌ಗೂ ದೊರೆಯುತ್ತಿಲ್ಲ. ನಮ್ಮ ಹಣ ಯಾರ ಜೇಬಿಗೆ ಸೇರಿದೆ ಎಂಬ ಉತ್ತರ ದೊರೆಯಬೇಕು. ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಸ್ಥಳಕ್ಕಾಗಮಿಸಬೇಕು. ಇಲ್ಲವಾದರೆ ನಿಮ್ಮನ್ನು ಹೋಗಲು ಬಿಡುವುದಿಲ್ಲ ಎಂದು ಮುತ್ತಿಗೆ ಹಾಕಿದರು.

Advertisement

ಎನ್‌.ಎಸ್‌. ಹೆಗಡೆ, ಎಸ್‌.ಪಿ. ಭಟ್ಟ, ಸುಬ್ರಾಯ ಭಟ್ಟ, ಗಣಪತಿ ಹೆಗಡೆ, ನಾರಾಯಣ ಮಡಿವಾಳ, ಗಣಪತಿ ಭಟ್ಟ, ಶಂಕರ ಗೌಡ, ಬೀರಾ ಗೌಡ, ಎಂ.ಆರ್‌. ಹೆಗಡೆ, ನಾಗೇಶ ಮಡಿವಾಳ ಹಾಗೂ ನೂರಾರು ರೈತರು ಹಾಜರಿದ್ದರು.

ಶನಿವಾರದೊಳಗೆ ಇತ್ಯರ್ಥಗೊಳಿಸುವ ಭರವಸೆ:

ಕಳೆದೆರಡು ತಿಂಗಳ ಹಿಂದೆ 64 ರೈತರು ಮಾಡಿದ ಸಾಲದಲ್ಲಿನ ಸಮಸ್ಯೆಯನ್ನು ಬರುವ ಶನಿವಾರದೊಳಗಾಗಿ ಇತ್ಯರ್ಥ ಮಾಡುತ್ತೇನೆ. ಇನ್ನುಳಿದರೈತರ ಸಮಸ್ಯೆಯನ್ನು ಹಂತಹಂತವಾಗಿ ಬಗೆಹರಿಸುತ್ತೇನೆ. ಯಾವ ರೈತರಿಗೂ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಶ್ರೀಧರ ಭಾಗ್ವತ ಪ್ರತಿಭಟನಾಕಾರರಿಗೆ ತಿಳಿಸಿದರು. ಬಳಿಕ ಶಾಂತರಾದ ಪ್ರತಿಭಟನಾಕಾರರು ಸೋಮವಾರ ರಾತ್ರಿ 9 ಗಂಟೆಯ ನಂತರ ಭಜನೆ ಸ್ಥಗಿತಗೊಳಿಸಿ ಬ್ಯಾಂಕಿನಿಂದ ಮನೆಗೆ ತೆರಳಿದರು.
Advertisement

Udayavani is now on Telegram. Click here to join our channel and stay updated with the latest news.

Next