ಶಿಡ್ಲಘಟ್ಟ: ತಾಲೂಕಿನ ಹಿತ್ತಲಹಳ್ಳಿಯ ಸಮೀಪದ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತ್ಯಾಜ್ಯ ಘಟಕದ ಮುಂದೆ ಧರಣಿ ನಡೆಸಿ ಪ್ರತಿಭಟನೆ ನಡೆಸಿದರು.
ನಗರಸಭೆಯ ವ್ಯಾಪ್ತಿಯಲ್ಲಿರುವ ವಿವಿಧ ವಾರ್ಡ್‌ಗಳಲ್ಲಿ ಸಂಗ್ರಹಿಸುವ ತ್ಯಾಜ್ಯ ಮತ್ತು ಗಲೀಜು ವಸ್ತುಗಳನ್ನು ಇಲ್ಲಿ ಸುರಿಯುತ್ತಿರುವುದರಿಂದ ದುರ್ವಾಸನೆ ಮತ್ತು ನೊಣಗಳ ಹಾವಳಿಯಿಂದ ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಈಗಾಗಲೇ ಹಿತ್ತಲಹಳ್ಳಿ ಗ್ರಾಮವನ್ನು ರೇಷ್ಮೆ ಬೆಳೆಗಾರರ ಗ್ರಾಮವೆಂದು ಘೋಷಣೆ ಮಾಡಿದೆ. ಆದರೆ ಉದ್ಯಾನವನ ಮಾಡುತ್ತೇವೆ ಎಂದು ಭರವಸೆ ನೀಡಿದ ನಗರಸಭೆ ಅಧಿಕಾರಿಗಳು ತ್ಯಾಜ್ಯ ಸಂಸ್ಕರಣ ಘಟಕ ಮಾಡಿ ಜನರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಕೂಡಲೇ ಈ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ವಿ.ಮುನಿಯಪ್ಪ, ತಹಶೀಲ್ದಾರ್ ಕೆ.ಅರುಂಧತಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ತ್ಯಾಜ್ಯ ಸಂಸ್ಕರಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ವಿ.ಮುನಿಯಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಘಟಕದಲ್ಲಿ ಬೆಂಕಿ ಬಿದ್ದಿದೆ, ಘಟಕ ಸ್ಥಳಾಂತರಿಸಲು ಹೋರಾಟ ನಡೆಸುತ್ತಿದ್ದೇವೆ. ನೀವು ಯಾಕೆ ತ್ಯಾಜ್ಯ ತುಂಬಿಕೊಂಡು ಬಂದಿದ್ದೀರಿ ಎಂದು ನಗರಸಭೆಯ ಕಸ ತುಂಬಿಕೊಂಡು ಬಂದಿದ್ದ ಟ್ರ್ಯಾಕ್ಟರ್‌ಗಳನ್ನು ಗ್ರಾಮಸ್ಥರು ವಾಪಸ್ಸು ಕಳುಹಿಸಿದರು.
ನಗರಸಭೆಯ ಪೌರಾಯುಕ್ತ ತ್ಯಾಗರಾಜ್, ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯ ದರ್ಶಿ ಭಕ್ತರಹಳ್ಳಿ ಭೈರೇಗೌಡ, ಹಿತ್ತಲಹಳ್ಳಿ ಗೋಪಾಲ ಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬೆಳ್ಳೂಟಿ ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ಯುವ ಮುಖಂಡ ಬೆಳ್ಳೂಟಿ ಸಂತೋಷ, ನಿರಂಜನ್, ಎಪಿಎಂಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್ ಇದ್ದರು.