ಪಾಂಡವಪುರ: ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರೆ ನಮ್ಮೊಂದಿಗೇ ಜಗಳಕ್ಕಿಯುತ್ತಾರೆ ಎಂದು ವೈದ್ಯರು, ಆರೋಗ್ಯ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆಸಿದ ಸಭೆಯಲ್ಲಿ ವೈದ್ಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮತ್ತಷ್ಟು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಶಾಸಕ ಪುಟ್ಟರಾಜು ಮಾತನಾಡಿ, ಕೋವಿಡ್ 19 ತಡೆಗಟ್ಟುವಲ್ಲಿ ವೈದ್ಯರು, ಸಿಬ್ಬಂದಿ, ಮತ್ತಿತರ ಇಲಾಖೆಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆಶಾಕಾರ್ಯಕರ್ತರ ಸೇವೆ ಗೌರವಿಸಬೇಕು. ಆದರೆ ಸಾರ್ವಜನಿಕರಲ್ಲಿ ಅರಿವಿನ ಕೊರತೆಇದೆ. ಅರಿವು ಮೂಡಿಸಲು ಮತ್ತಷ್ಟು ಪ್ರಯತ್ನಿಸೋಣ ಎಂದು ತಿಳಿಸಿದರು.
ಅಲ್ಲದೆ ಆಶಾಕಾರ್ಯಕರ್ತೆಯರಿಗೆ ನಿತ್ಯ ಬಳಿಕೆ ಮಾಡುವ ಸಮವಸ್ತ್ರದ ಜತೆಗೆ ಪಡಿತರ ಕಿಟ್ ಗಳ ವ್ಯವಸ್ಥೆ ಮಾಡಲಾಗುವುದು. ಆಸ್ಪತ್ರೆಗೆ ಬರುವ ಸಾರ್ವಜನಿಕರು ವೈದ್ಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅವರು ಪ್ರಾಣದ ಹಂಗು ತೊರೆದು ಸಮಾಜದ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಆಸ್ಪತ್ರೆಗೆ ಬರುವ ಸಾರ್ವಜನಿಕರು ಅಂತರ ಕಾಯ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳಿ. ಅದನ್ನು ಮೀರಿ ವೈದ್ಯರೊಂದಿಗೆ ಸಂಘರ್ಷಕ್ಕೆ ಇಳಿದರೆ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂದು ಸೂಚಿಸಿದರು.
ಪಟ್ಟಣ ಠಾಣೆಯ ಎಸ್‌ಐ ಸುಮಾರಾಣಿ ಅವರನ್ನು ಆಸ್ಪತ್ರೆಗೆ ಕರೆಸಿ ಆಸ್ಪತ್ರೆಗೆ ಬರುವ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಬ್ಬ ಸಿಬ್ಬಂದಿಯನ್ನು ಇಲ್ಲಿಗೆ ನೇಮಕ ಮಾಡಬೇಕು. ವೈದ್ಯರು, ಸಿಬ್ಬಂದಿಯೊಂದಿಗೆ ಸಂಘರ್ಷಕ್ಕೆ ಇಳಿಯದಂತೆ ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕುಮಾರ್ ಹಾಜರಿದ್ದರು.