Advertisement

ಆಲಡ್ಕ ಮೈದಾನದ ತೆರೆದ ಬಾವಿ ಮುಚ್ಚಲು ಮನವಿ

01:36 PM Dec 05, 2018 | |

ಬಂಟ್ವಾಳ: ಪಾಣೆಮಂಗಳೂರು ಆಲಡ್ಕ ಮೈದಾನದಲ್ಲಿ ಹಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲಿ ಅಪಾಯ ಆಹ್ವಾನಿಸುವಂತಿರುವ ಬಾವಿಯನ್ನು ಮುಚ್ಚಲು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರಿಗೆ ಮಾಡಿದ ಮನವಿಕೆ ಸ್ಪಂದಿಸಿದ ಶಾಸಕರು, ಬಾವಿಯು ನಿರುಪಯುಕ್ತವಾಗಿದ್ದಲ್ಲಿ ಮುಚ್ಚಿಸುವ ಕ್ರಮಕ್ಕೆ ಸೂಚಿಸುವುದಾಗಿ ತಿಳಿಸಿದ್ದಾರೆ.

Advertisement

ತೆರೆದ ಬಾವಿಗಳಿಂದ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ಎರಡು-ಮೂರು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಲ್ಲ ರೀತಿಯ ತೆರೆದ ಬಾವಿಗಳನ್ನು ಮುಚ್ಚುವಂತೆ ಸ್ಥಳೀಯಾಡಳಿತಗಳಿಗೆ ಆದೇಶ ನೀಡಿತ್ತು. ಪಾಣೆಮಂಗಳೂರಿನ ತೆರೆದ ಬಾವಿಗೆ ಸೂಕ್ತ ಕಾಯಕಲ್ಪ ಒದಗಿಸಲು ಬಂಟ್ವಾಳ ಪುರಸಭೆ ವಿಫಲರಾಗಿರುವ ಬಗ್ಗೆ ಸ್ಥಳೀಯರು ಮನವಿ ಮಾಡಿದ್ದರು.

ಪಾಣೆಮಂಗಳೂರು ಗ್ರಾಮದ ಸರ್ವೆ ನಂ. 28ರ ಆಲಡ್ಕ ಮೈದಾನದಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ವಿಶೇಷ ಯೋಜನೆ-2002ರಡಿ 6 ಮೀಟರ್‌ ವ್ಯಾಸ ಮತ್ತು 8 ಮೀಟರ್‌ ಆಳದ ಈ ತೆರೆದ ಬಾವಿಯನ್ನು ನಿರ್ಮಿಸಿ 2003ರ ಎ. 23 ರಂದು ಮುಂದಿನ ನಿರ್ವಹಣೆಗಾಗಿ ಬಂಟ್ವಾಳ ನಗರ ಪಂ.ಗೆ ಹಸ್ತಾಂತರಿಸಲಾಗಿತ್ತು. ಆದರೆ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಬಾವಿಯು ನಿರುಪಯುಕ್ತವಾಗಿತ್ತು. ಇಲ್ಲೇ ಸಮೀಪದಲ್ಲಿ ನೂರಾರು ವಾಸ್ತವ್ಯದ ಮನೆಗಳಿದ್ದು, ನಿತ್ಯ ಹಲವು ಮಂದಿ ಮಕ್ಕಳು ಈ ಮೈದಾನದಲ್ಲಿ ಆಟವಾಡಲು ಬರುತ್ತಾರೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ರವಿವಾರ ಇಲ್ಲಿಗೆ ಆಗಮಿಸಿದ ಬಂಟ್ವಾಳ ಶಾಸಕರಿಗೆ ಇಲ್ಲಿನ ಬಾವಿಯ ಅಪಾಯದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ಪಂದಿಸಿದ ಅವರು ತತ್‌ಕ್ಷಣ ಅಪಾಯಕಾರಿ ಬಾವಿಯನ್ನು ಮುಚ್ಚಲು ಅಥವಾ ರಕ್ಷಣಾ ಕವಚ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next