ಶಿಡ್ಲಘಟ್ಟ: ಆನ್‌ಲೈನ್ ಪರೀಕ್ಷೆ ರದ್ದುಪಡಿಸಬೇಕು, ಕಾಲೇಜಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಎನ್‌ಎಸ್‌ಯುಐ ಸಂಘಟನೆಯ ನೇತೃತ್ವದಲ್ಲಿ ಶಿಡ್ಲಘಟ್ಟ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಇಂದಿರಾ ಕ್ಯಾಂಟೀನ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಸಾರಿಗೆ ಬಸ್ ನಿಲ್ದಾಣದಿಂದ ಕೋಟೆವೃತ್ತ, ಕೆಂಪಣ್ಣ ವೃತ್ತ ಹಾಗೂ ದಿಬ್ಬೂರಹಳ್ಳಿ ವೃತ್ತದ ಮೂಲಕ ಪ್ರವಾಸಿ ಮಂದಿರ ರಸ್ತೆ, ದಿಬ್ಬೂರಹಳ್ಳಿ ರಸ್ತೆಯ ಮೂಲಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಎನ್‌ಎಸ್‌ಯುಐನ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ ಮಾತನಾಡಿ, ಐಟಿಐ ಕಾಲೇಜುಗಳಲ್ಲಿ ಮೂಲ ಸೌಕರ್ಯ ಇಲ್ಲ. ನೂರಾರು ವಿದ್ಯಾರ್ಥಿಗಳಿಗೆ ಕೇವಲ 3 ಕಂಪ್ಯೂಟರ್‌ಗಳಿವೆ. ಕಂಪ್ಯೂಟರ್ ಕಲಿಸಲು ಶಿಕ್ಷಕರ ಕೊರತೆಯಿದೆ. ಕೆಲ ಕಾಲೇಜುಗಳಲ್ಲಿ ಕಂಪ್ಯೂಟರ್ ಇಲ್ಲ, ಶಿಕ್ಷಕರೂ ಇಲ್ಲ. ಅಂತಹ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನವೇ ಇರುವುದಿಲ್ಲ. ಅಂತಹದ್ದರಲ್ಲಿ ಆನ್‌ಲೈನ್ ಪರೀಕ್ಷೆ ನಡೆಸುವುದು ಹೇಗೆ ಎಂದು ಎಂದು ಪ್ರಶ್ನಿಸಿದರು.
ಕಾಲಾವಕಾಶ ನೀಡಲಿ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಂಪ್ಯೂಟರ್ ಹಾಗೂ ಕಂಪ್ಯೂಟರ್ ಶಿಕ್ಷಣ ಕೊಡಲು ಶಿಕ್ಷಕರನ್ನು ನೇಮಿಸಲಿ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಕಾಲಾವಕಾಶ ನೀಡಿದ ನಂತರ ಆನ್‌ಲೈನ್ ಪರೀಕ್ಷೆ ನಡೆಸಲಿ ಎಂದರು. ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಇಒ ಬಿ.ಶಿವಕುಮಾರ್ ಹಾಗೂ ಶಿರಸ್ತೇದಾರ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇಒ ಶಿವಕುಮಾರ್ ಮಾತನಾಡಿ, ಕಾಲೇಜಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುತ್ತೇನೆ. ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿ ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಈಗಾಗಲೇ ಶಾಸಕರ ಸೂಚನೆ ಮೇರೆಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೂಂದು ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದರು.