ಪುತ್ತೂರು: ವಸತಿ/ ವಸತಿಯೇತರರಿಗಾಗಿ ಭೂ ಪರಿವರ್ತಿತ ಜಮೀನುಗಳಲ್ಲಿನ ಏಕ ವಿನ್ಯಾಸ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆ ಅನುಮೋದನೆ ಪಡೆಯುವ ಆದೇಶವನ್ನು ಸರಕಾರ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಕಬಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯು ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಿಡಿಒ ಆಶಾ ಇಲಾಖೆಯ ಸುತ್ತೋಲೆಯನ್ನು ಸಭೆಯ ಗಮನಕ್ಕೆ ತಂದರು. ಸದಸ್ಯ ಶಾಬಾ ಮಾತನಾಡಿ, ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆಯ ಅನುಮೋದನೆಗಾಗಿ ಮಂಗಳೂರಿಗೆ ತೆರಳಬೇಕಾಗುತ್ತದೆ. ಇದರಿಂದ ಬಡವರು ತೀರಾ ತೊಂದರೆ ಎದುರಿಸಲಿದ್ದು ಅವರು ಮನೆ ಕಟ್ಟುವುದೇ ಸಾಧ್ಯವಿಲ್ಲ. ಹೀಗಾಗಿ ಈ ಕಾನೂನುನನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.
ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಈ ಕುರಿತು ಸಭೆಯಲ್ಲಿ ಚರ್ಚಿಸಿ ಹೊಸ ನಿಯಮ ವನ್ನು ಹಿಂಪಡೆಯುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು. ಗ್ರಾ.ಪಂ.ನಲ್ಲಿ ಕಳೆದ 18 ವರ್ಷಗಳಿಂದ ನೀರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೀಲಪ್ಪ ಗೌಡ ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಸದಸ್ಯರಾದ ರಾಜೇಶ್, ಪ್ರೀತಾ, ಗೀತಾ, ಸುಶೀಲಾ, ವಾರಿಜ, ಶಂಕರಿ ಜಿ.ಭಟ್, ಪುಷ್ಪಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುರೇಶ್ ವಂದಿಸಿದರು.
ರಸ್ತೆ ಮಾರ್ಜಿನ್ ವಿನಾಯಿತಿಗೆ ಆಗ್ರಹ
ವಿದ್ಯಾಪುರದಲ್ಲಿ 94ಸಿ ಯೋಜನೆಯಲ್ಲಿ ಹಕ್ಕುಪತ್ರ ಪಡೆದುಕೊಂಡಿರುವ ಬಡ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ರಸ್ತೆ ಮಾರ್ಜಿನ್ ಉಂಟಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಆ ಕುಟುಂಬ ತೀರಾ ಬಡತನದ ಕುಟುಂಬವಾಗಿದೆ. ಅವರಿಗೆ ಮನೆ ಕಟ್ಟಲು ಬೇರೆ ಜಾಗವಿಲ್ಲ. ಮಾನವೀಯ ನೆಲೆಯಲ್ಲಿ ಅವಕಾಶ ಕೊಡುವಂತೆ ಸದಸ್ಯ ಉಮ್ಮರ್ ಫಾರೂಕ್ ಆಗ್ರಹಿಸಿದರು.
ಈ ಕುರಿತು ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು. ವಿದ್ಯಾಪುರ 4ನೇ ಅಡ್ಡ ರಸ್ತೆಯ ಇಕ್ಕೆಡೆಗಳಲ್ಲಿ ಬೇಲಿ ಹಾಕಿ ರಸ್ತೆಯನ್ನು ಕಿರಿದುಗೊಳಿಸಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿರುವುದಲ್ಲದೆ ರಸ್ತೆ ಕಾಂಕ್ರೀಟಿಗೆ ಅಡ್ಡಿಯುಂಟಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು
ವಿದ್ಯುತ್ ಬಿಲ್ ಬಾಕಿ
ಪಂಚಾಯತ್‌ನ ಕುಡಿಯುವ ನೀರಿನ ಘಟಕಗಳು ಹಾಗೂ ಬೀದಿ ದೀಪಗಳು ಬಿಲ್‌ಗಳು ಸೇರಿ ಒಟ್ಟು 60,86,000 ರೂ. ನಷ್ಟು ವಿದ್ಯುತ್ ಬಿಲ್ ಮೆಸ್ಕಾಂಗೆ ಪಾವತಿಸಲು ಬಾಕಿ ಇದೆ. ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಉರಿಯುತ್ತಿರುವ ಬೀದಿ ದೀಪಗಳಿಗೆ 1,81,000 ರೂ. ಶುಲ್ಕ ವಿಧಿಸಿರುವುದಾಗಿ ಪಿಡಿಒ ಆಶಾ ಸಭೆಯಲ್ಲಿ ಮಾಹಿತಿ ನೀಡಿದರು.