Advertisement

10 ಸಾವಿರ ರೂ. ಪರಿಹಾರ ಘೋಷಿಸಿ

10:31 AM Jul 19, 2020 | Suhan S |

ಬಂಗಾರಪೇಟೆ: ಕೋವಿಡ್  ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿನಿಂದ ವ್ಯಾಪಾರ ಇಲ್ಲದೆ, ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ಆಗಿದ್ದು, ತಲಾ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ವ್ಯಾಪಾರಿಗಳ ಸಂಘದಿಂದ ಪಟ್ಟಣದ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.

Advertisement

ನಾಲ್ಕು ತಿಂಗಳಿಂದ ಲಾಕ್‌ಡೌನ್‌ ಮಾಡಿರುವ ಕಾರಣ ಕುಟುಂಬ ನಿರ್ವಹಣೆಗೆ ಯಾವುದೇ ಆದಾಯ ಮೂಲ ಇಲ್ಲವಾಗಿದೆ. ಹೂವು, ಹಣ್ಣು, ತರಕಾರಿ ಮಾಡುವವರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಒದಗಿದೆ. ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಮಡಿವಾಳರು, ಕ್ಷೌರಿಕ ಸೇರಿದಂತೆ 11 ವಲಯದವರಿಗೆ ಸರ್ಕಾರ ಪರಿಹಾರ ಧನ ಘೋಷಿಸಿದೆ. 2017 ರಿಂದ ಬೀದಿ ಬದಿ ವ್ಯಾಪಾರಿಗಳು ಸರ್ಕಾರಕ್ಕೆ ತೆರಿಗೆ ನೀಡುತ್ತಿದ್ದು, ಕೋಟ್ಯಂತರ ರೂ. ಹಣ ಸಂಗ್ರಹವಾಗಿದೆ. ಆ ಹಣದಲ್ಲಿಯೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸ್ಟ್ರೀಟ್‌ ವೆಂಡರ್ ಆತ್ಮ ನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ 10 ಸಾವಿರ ರೂ. ಸಾಲ ನೀಡುವ ಅವಕಾಶವಿದೆ. ಆದರೆ, ಗುರುತಿನ ಚೀಟಿ ಇಲ್ಲದವರಿಗೆ ಅದು ಅನ್ವಯ ಆಗುವುದಿಲ್ಲ. ಗುರುತು ಚೀಟಿ ಇಲ್ಲದವರಿಗೂ ಸಾಲ ನೀಡಬೇಕು. ಕೋವಿಡ್  ಸಂಕಷ್ಟದಿಂದ ಪಾರು ಮಾಡಲು ದಿನಸಿ ಕಿಟ್‌ ವಿತರಿಸಬೇಕು ಎಂದು ಕಾರ್ಮಿಕರ ಸಂಘದ ಮುಖಂಡ ಪ್ರಭು ಒತ್ತಾಯಿಸಿದರು.

ತಾಲೂಕು ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಟರಾಜ್‌, ಕಾರ್ಯದರ್ಶಿ ಪಿಲ್ಲಪ್ಪ, ಮುಖಂಡರಾದ ನಾಗರಾಜ್‌, ಅಹ್ಮದ್‌ ಅಂಜದ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next