ಬೆಂಗಳೂರು: ಕುಂಚಿಟಿಗ ಸಮುದಾಯವನ್ನು ಕೇಂದ್ರ ಸರ್ಕಾರದ “ಇತರೆ ಹಿಂದುಳಿದ ವರ್ಗ’ (ಒಬಿಸಿ) ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಆಗ್ರಹಿಸಿದ್ದಾರೆ.
ವಿಶ್ವ ಕುಂಚಿಟಿಗರ ಪರಿಷತ್ತು ನಗರದ ಸನಾತನ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ಪಟ್ಟಿ ಗೊಂದಲದಿಂದಾಗಿ ಕುಂಚಿಟಿಗ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಹಿನ್ನಡೆ ಅನುಭವಿಸುವಂತಾಗಿದೆ. ಯಾವ ಸಮುದಾಯದ ವಿರುದ್ಧವೂ ನಾವಿಲ್ಲ. ಆದರೆ, ನಮ್ಮ ಸಬಲೀಕರಣಕ್ಕಾಗಿ ಒಬಿಸಿ ಪಟ್ಟಿಗೆ ಸೇರಿಸಬೇಕು ಎನ್ನುವುದು ಒಕ್ಕೊರಲ ಒತ್ತಾಯ. ಈ ವಿಚಾರದಲ್ಲಿ ರಾಜಕಾರಣ ಮರೆತು ಸಮುದಾಯ ಹೋರಾಟ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ಕುಂಚಿಟಿಗರ ಜನಸಂಖ್ಯೆ 25 ಲಕ್ಷ ಇದ್ದು, ಸುಮಾರು 27 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಆದರೆ, ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಇಲ್ಲ. ಈ ಬಾರಿ ಕೇವಲ ಇಬ್ಬರು ಶಾಸಕರು ಗೆದ್ದಿದ್ದಾರೆ. ಸಂಘಟಿತ ಹೋರಾಟ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಿದರೆ 27 ಶಾಸಕರು ಗೆಲ್ಲುವುದು ಕಷ್ಟವಲ್ಲ. ಸಮುದಾಯದ ಮಕ್ಕಳ ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮೀಸಲಾತಿ ತುಂಬಾ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕುಂಚಶ್ರೀ-ಕುಂಚಿಟಿಗ ರತ್ನ ಹಾಗೂ ಕುಂಚಿಟಿಗ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೆಳೆ 2020ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಕುಂಚಿಟಿಗ ಸಮುದಾಯದ ಮುಖಂಡರಾದ ಡಾ.ವಿ.ಅಂಜನಪ್ಪ, ಮುನಿಕೆಂಚಯ್ಯ ಇತರರು ಇದ್ದರು.