Advertisement

ಹೊಸ ವೇತನ ಆಯೋಗದ ರಚನೆಗೆ ಆಗ್ರಹಿಸಿ ಮನವಿ

03:31 PM May 05, 2017 | |

ಧಾರವಾಡ: ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆದಷ್ಟು ಬೇಗ ಹೊಸ ವೇತನ ಆಯೋಗದ ರಚನೆಗೆ ಆಗ್ರಹಿಸಿ ಅಖೀಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದಿಂದ ಗುರುವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

Advertisement

ಸಿ.ಎಂ. ಸಿದ್ದರಾಮಯ್ಯ ಹೊಸ ವೇತನ ಆಯೋಗ ರಚಿಸುವುದಾಗಿ 2017-18ನೇ ಸಾಲಿನ ಆಯ ವ್ಯಯದಲ್ಲಿ ಘೋಷಣೆ ಮಾಡಿ ಈತನಕ ವೇತನ ಆಯೋಗ ರಚಿಸದೇ ವಿಳಂಬ ನೀತಿ ಅನುಸರಿಸುತ್ತಿದ್ದು, ಮುಂದಿನ 6 ತಿಂಗಳೊಳಗೆ ಹೊಸ ವೇತನ ಆಯೋಗದಿಂದ ವರದಿ ತರಿಸಿಕೊಂಡು ವೇತನ ಪರಿಷ್ಕರಣೆ ಮಾಡಬೇಕು.

2017ರ ಜನವರಿ ತಿಂಗಳಿಂದ ಪೂರ್ವಾನುವನ್ವಯ ಎಲ್ಲ ರಾಜ್ಯ ಸರಕಾರಿ ನೌಕರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರ (ಐ.ಆರ್‌.) ಘೋಷಿಸಬೇಕು ಎಂದು ಆಗ್ರಹಿಸಲಾಯಿತು.1966ರಿಂದ 2011ರವರೆಗೆ 10 ವೇತನ ಆಯೋಗಗಳ ಮೂಲಕ ವೇತನ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ಇದುವರೆಗೆ ಕೇವಲ ಐದು ವೇತನ ಆಯೋಗಗಳನ್ನಷ್ಟೇ ರಚಿಸಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಿಸಿದೆ.

ಇದರಿಂದ, ಕೇಂದ್ರ ಸರ್ಕಾರಿ ನೌಕರರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದ ನಡುವಿನ ವ್ಯತ್ಯಾಸ ಸುಮಾರು ಶೇ. 44ರಷ್ಟಾಗಿದೆ. ಈಗ ಕೇಂದ್ರದ 7 ನೇ ವೇತನ ಆಯೋಗದ ಶಿಫಾರಸುಗಳು ಅನುಷ್ಠಾನಗೊಂಡಲ್ಲಿ ಈ ವ್ಯತ್ಯಾಸವು ಶೇ. 65ಕ್ಕೆ ಏರಲಿದೆ ಎಂಬ ಸಂಗತಿಗಳನ್ನು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ. 

ಖಂಡನೆ: ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸರಕಾರಿ ನೌಕರರು ಸಮಾವೇಶಗೊಂಡು ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು. ಸರಕಾರಿ ನೌಕರರ ಪರವಾದ ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಳ್ಳದೇ ರಾಜ್ಯದ 6.5 ಲಕ್ಷ ಸರಕಾರಿ ನೌಕರರಿಗೆ ನ್ಯಾಯ ಒದಗಿಸಲು ಹೋರಾಟ ಕೈಕೊಂಡ ಅಖೀಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಹೋರಾಟ ವಿಫಲಗೊಳಿಸಲು ಯತ್ನಿಸಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಡೆಯನ್ನು ಖಂಡಿಸಲಾಯಿತು. 

Advertisement

ಸರಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಮುದಗಣ್ಣವರ, ಉಪಾಧ್ಯಕ್ಷ ಗುರುಮೂರ್ತಿ ಯರಗಂಬಳಿಮಠ, ಪ್ರಧಾನ ಕಾರ್ಯದರ್ಶಿ ಮುರುಘೇಶ ಸವಣೂರ, ರಾಜ್ಯ ಪರಿಷತ್‌ ಸದಸ್ಯ ಎಚ್‌.ಬಿ. ವಾದಿರಾಜ, ಜಿ.ಜಿ.ಜಿನ್ನೂರ, ಮಂಜುನಾಥ ಹೆಗಡೆ, ಪ್ರಭು ಅಗಡಿ, ಜಿ.ಐ.ಗಣಾಚಾರಿ, ಗುರುಪೋಳ, ಶಂಕರ ಘಟ್ಟಿ, ಎಂ.ಜಿ. ಮರಚರೆಡ್ಡಿ, ಗುಡಿ, ಭಾರತಿ ಭಟ್‌, ನರಸಾಪೂರ, ಸಿ.ಎಸ್‌. ಹಿರೇಮಠ, ವಿನೋದಾ ಉಪ್ಪಲದಿನ್ನಿ, ನಾಗವೇಣಿ, ರೇಣುಕಾ, ವಾಯಿದಾ, ಹರಕುಣಿ ಪ್ರತಿಭಟನೆಯಲ್ಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next